ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದಲ್ಲಿರುವ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೂರನೇ ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದರು.
ಹಲವು ಭಕ್ತರು ಶ್ರೀ ಹರಿಶಂಕರ ದೇವಸ್ಥಾನದ ಬಳಿಯಲ್ಲಿ ವರ್ಷದಾದ್ಯಂತ ಕಲ್ಲಿನ ಬಸವಣ್ಣನ ಬಾಯಿಯಿಂದ ಸದಾ ಹರಿಯುವ ಪವಿತ್ರ ಮತ್ತು ಔಷಧೀಯ ಗುಣವಿದೆ ಎಂದು ನಂಬಿರುವ ನೀರನ್ನು ತಾವು ತಂದ ಬಾಟಲಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದುದು ಕಂಡು ಬಂದಿತು.
ಐದು ವರ್ಷದಲ್ಲಿ ಎರಡು ಬಾರಿ ನಡೆಯುವ ಶ್ರೀ ಕುಮಾರಸ್ವಾಮಿ ಜಾತ್ರೆ, ಶ್ರಾವಣ ಮಾಸದ ಮೂರನೇ ಸೋಮವಾರ ಹಾಗೂ ಸ್ಕಂದ ಷಷ್ಟಿಯಂದು ಶ್ರೀ ಕುಮಾರಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ದಿನಗಳಂದು ನಾಡಿನ ವಿವಿಧೆಡೆಗಳಿಂದ ಸಾವಿರಾರು ಸಂಖೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಭಾಗ್ಯ ಪಡೆಯುತ್ತಾರೆ.ಶ್ರಾವಣ ಮಾಸದ ಮೂರನೇ ಸೋಮವಾರ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ವಿವಿಧೆಡೆಯಿಂದ ಹೆಚ್ಚಿನ ಸಂಖೆಯಲ್ಲಿ ಭಕ್ತರು ಬರುವ ಕಾರಣ, ಈ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ನಸುಕಿನಿಂದಲೇ ನೂರಾರು ಭಕ್ತರು ಸಂಡೂರಿನಿಂದ ೧೨ ಕಿಮೀ ದೂರದಲ್ಲಿರುವ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಭಕ್ತರಿಗೆ ದೇವಸ್ಥಾನಕ್ಕೆ ಹೋಗಿಬರಲು ರಸ್ತೆ ಸಾರಿಗೆ ಸಂಸ್ಥೆಯವರು ವಿಶೇಷ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.