ವೈಭವದಿಂದ ನಡೆದ ಶ್ರೀಚೆಲುವನಾರಾಯಣಸ್ವಾಮಿ ಮಹಾ ರಥೋತ್ಸವ

KannadaprabhaNewsNetwork |  
Published : Mar 25, 2024, 12:47 AM IST
24ಕೆಎಂಎನ್ ಡಿ11 | Kannada Prabha

ಸಾರಾಂಶ

ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಲಕ್ಷಾಂತರ ಭಕ್ತರ ಸಮಕ್ಷದಲ್ಲಿ ಮಹಾರಥೋತ್ಸವ, ಮಹಾರಥೋತ್ಸವಕ್ಕೂ ಮೊದಲು ಚೆಲುವನಾರಾಯಣಸ್ವಾಮಿಗೆ ಶ್ರೀದೇವಿಭೂದೇವಿ ಕಲ್ಯಾಣನಾಯಕಿ ಸಮೇತ ಉತ್ಸವ ನೆರವೇರಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವೈರಮುಡಿ ಬ್ರಹ್ಮೋತ್ಸವ ನಿಮಿತ್ತ ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ಶ್ರೀಚೆಲುವನಾರಾಯಣಸ್ವಾಮಿ ಮಹಾರಥೋತ್ಸವ ಭಾನುವಾರ ವೈಭವದಿಂದ ನೆರವೇರಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ತೇರೊಪ್ಪತ್ತಿನ ಉಪವಾಸ ಮಾಡಿ ರಥ ದರ್ಶನ ಮಾಡಿ ಹರಕೆ ಪೂರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್, ದರ್ಶನ್ ಪುಟ್ಟಣ್ಣಯ್ಯ ಸಹೋದರ ರಾಘು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಸೇರಿದಂತೆ ಹಲವು ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಮಹಾ ರಥೋತ್ಸವದ ಪ್ರಯುಕ್ತ ದೇವಾಲಯದ ಪೂಜಾ ಕೈಂಕರ್ಯವನ್ನು ಬೆಳಗಿನ ಜಾವ 6 ಗಂಟೆಗೆ ಆರಂಭಿಸಲಾಯಿತು. ರಥಬಲಿ ಪ್ರದಾನದ ನಂತರ ಅಮ್ಮನವರ ಸನ್ನಿಧಿಯ ಬಳಿ ಬೆಳಗ್ಗೆ 8 ಗಂಟೆ ವೇಳೆಗೆ ಯಾತ್ರಾಧಾನ ನೆರವೇರಿಸಲಾಯಿತು.

ನಂತರ 9-15 ರ ವೇಳೆಗೆ ವೇದಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ಶ್ರೀದೇವಿ ಭೂದೇವಿ ಕಲ್ಯಾಣ ನಾಯಕಿಯರೊಂದಿಗೆ ವಜ್ರ ಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಒಳಪ್ರಾಕಾರ ಮತ್ತು ಹೊರ ಪ್ರಾಕಾದರಲ್ಲಿ ನಡೆದ ನಂತರ ರಥಮಂಟಪ ತಲುಪಿತು. ರಥ ಮಂಟಪಕ್ಕೆ ಮೂರು ಪ್ರದಕ್ಷಿಣೆ ಪೂರೈಸಿದ ನಂತರ ಜೋಯಿಸರ ಮಹೂರ್ತ ಪಠಣದ ತರುವಾಯ ರಥಾರೋಹಣ ನೆರವೇರಿಸಲಾಯಿತು.

ಮಹಾ ರಥದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಳೆ-ಬೆಳೆ ಉತ್ತಮವಾಗಿ ಆಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. 11.30ರ ವೇಳೆಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚತುರ್ವೀದಿಗಳಲ್ಲಿ ಸಡಗರ ಸಂಭ್ರಮದಿಂದ ಸಂಚರಿಸಿ 3 ಗಂಟೆಗೆ ಮುಕ್ತಾಯವಾಯಿತು.

ಹರಿದು ಬಂದ ಭಕ್ತಸಾಗರ:

ಈ ವರ್ಷ ನಡೆದ ಮಹಾರಥೋತ್ಸವಕ್ಕೆ ನಿರೀಕ್ಷೆಗೂ ಮೀರಿ ಭಕ್ತಸಾಗರವೇ ಹರಿದು ಬಂದಿತ್ತು. ಉತ್ಸವ ಬೀದಿಗಳು, ಕಲ್ಯಾಣಿ ದೇವಾಲಯಗಳು ಹಾಗೂ ನರಸಿಂಹಸ್ವಾಮಿ ಬೆಟ್ಟದಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು.

ವೈರಮುಡಿ ಉತ್ಸವದಷ್ಠೇ ಭಕ್ತರು ಆಗಮಿಸಿ ರಥದ ದರ್ಶನ ಮಾಡಿ ಹಣ್ಣು-ಜವನ ಎಸೆದು ಭಕ್ತಿಭಾವ ಪ್ರದರ್ಶಿಸಿದರು. ತೇರೆಳೆಯುವ ಭಕ್ತರ ದಾಹ ತಣಿಸಲು ದಾನಿಗಳು ಮುಂದೆ ನಿಂತು ಅಲ್ಲಲ್ಲಿ ಮಜ್ಜಿಗೆ, ಪಾನಕ, ನೀರು ವಿತರಿಸಿದರು.

ಕಳೆದ ಸಲ ಮಹಾ ರಥೋತ್ಸವ 11 ಗಂಟೆ ವೇಳೆ ಮುಕ್ತಾಯವಾಗಿ ಭಕ್ತರು ನಿರಾಸೆಯಾಗಿದ್ದರು. ಜಿಲ್ಲಾಧಿಕಾರಿಗಳು ಸಹ ಮೇಲುಕೋಟೆ ದೇವಾಲಯದ ಇಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವರ್ಷ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಸೂಚನೆಯಂತೆ ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪರಿಚಾರಕ ಪಾರ್ಥಸಾರಥಿ ಮಾರ್ಗದರ್ಶನದಲ್ಲಿ ದೇವಾಲಯದ ಶ್ರೀಪಾದದವರು, ಬಂಡೀಕಾರರು, ಭಕ್ತಸ್ನೇಹಿಯಾಗಿ ಮಹಾರಥೋತ್ಸವ ನಡೆಸುವ ಮೂಲಕ ಭಕ್ತರ ಮೆಚ್ಚುಗೆಗೆ ಪಾತ್ರರಾದರು.

PREV