ಕನ್ನಡಪ್ರಭ ವಾರ್ತೆ ಬೆಳ್ತಂಗಡಿಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ,ಮಹಿಳಾ ಘಟಕ ಹಾಗು ಯುವ ವಿಪ್ರ ವೇದಿಕೆ ಸಹಯೋಗದಲ್ಲಿ ಸೋಮವಾರ ಪೂರ್ವಾಹ್ನ ದೇವಸ್ಥಾನದ ಶ್ರೀರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಅಷ್ಟಾಕ್ಷರಿ ಯಾಗ ನೆರವೇರಿತು.
10 ಯಜ್ಞ ಕುಂಡಗಳಲ್ಲಿ,13 ಮಂದಿ ಪುರೋಹಿತರು ಹಾಗು 110 ವಿಪ್ರ ಬಂಧುಗಳ ಸಹಕಾರದದಲ್ಲಿ 18 ಮಂದಿ ಪ್ರಾಯೋಜಕ ಸೇವಾರ್ಥಿಗಳ ನೆರವಿನಿಂದ ಹಾಗು ಶಿಬಿರದ ವಟುಗಳ ಸಹಯೋಗದಲ್ಲಿ ಯಾಗ ನಡೆಸಲಾಯಿತು.ಕೊಡುಗೈ ದಾನಿಗಳ ಸಹಕಾರದಿಂದ 3 ಲಕ್ಷ ಶ್ರೀ ನಾರಾಯಣ ಮಂತ್ರದಲ್ಲಿ ಹಾಗು ವೇದಮೂರ್ತಿ ವಾದಿರಾಜ ಶಬರಾಯರು ಪ್ರಧಾನ ಕುಂಡದಲ್ಲಿ ಶ್ರೀ ಅಷ್ಟಾಕ್ಷರಿ ಯಜ್ಞ ನಡೆಸಿ ಮದ್ಯಾಹ್ನ ಪೂರ್ಣಾಹುತಿ ನೆರವೇರಿಸಿದರು.
ಶ್ರೀ ಅಷ್ಟಾಕ್ಷರಿ ಯಾಗದ ಮಹತ್ವ ತಿಳಿಸಿದ ವೇದಮೂರ್ತಿ ಶಿವಪ್ರಸಾದ್ ಬಾಯಾರಿತ್ತಾಯರು, ನಾರಾಯಣ ನಾಮಸ್ಮರಣೆಯಿಂದ ಜನ್ಮಾಂತರದ ಸಕಲ ಪಾಪಕರ್ಮಗಳು ನಾಶವಾಗುವುದು. ನಮ್ಮ ಜನ್ಮ ಸಾರ್ಥಕ್ಯಕ್ಕೆ ಜಪ ಕರ್ಮ, ಹೋಮಗಳಿಂದ ಬಿಂಬವಾಗಿರುವ ಪರಮಾತ್ಮನನ್ನು ಪ್ರತಿಬಿಂಬವಾಗಿರುವ ನಾವು ಅನುಕ್ಷಣ ಆರಾಧಿಸುವುದರಿಂದ ಮಾನಸಿಕ ಶಾಂತಿ,ಅರೋಗ್ಯ,ನೆಮ್ಮದಿ,ಸಕಲ ಸೌಭಾಗ್ಯ ಪ್ರಾಪ್ತಿಯಾಗುವುದು ಎಂದು ನುಡಿದರು.ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ , ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಕಾರ್ಯದರ್ಶಿ ಹರ್ಷಕುಮಾರ್ ಕೆ. ಎನ್ , ವಿವಿಧ ವಲಯಗಳ ಪ್ರತಿನಿಧಿಗಳು,ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರಿನ ಉದ್ಯಮಿ ವೆಂಕಟ್ರಮಣ ರಾವ್ ಅವರು ವಟು, ಬ್ರಾಹ್ಮಣ ,ಸುವಾಸಿನಿ ಆರಾಧನೆ ನಡೆಸಿದರು. ಉಜಿರೆ ವಲಯದ ಉಪಾಧ್ಯಕ್ಷ ಮುರಲೀಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.