ಕನ್ನಡಪ್ರಭ ವಾರ್ತೆ ನಾಗಮಂಗಲ
ಹೋಳಿ ಹುಣ್ಣಿಮೆಯ ದಿನವಾದ ಮಂಗಳವಾರ ಸೂರ್ಯೋದಯಕ್ಕೂ ಮುನ್ನ ನಸುಕಿನಲ್ಲಿ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಕ್ಷೇತ್ರದ ರಥದ ಬೀದಿಯಲ್ಲಿ ಬಗೆ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಸರ್ವಾಲಂಕೃತವಾಗಿದ್ದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ಸೋಮವಾರ ಇಡೀ ರಾತ್ರಿ ಶ್ರೀಕ್ಷೇತ್ರದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಗರೋಪಾದಿಯಲ್ಲಿ ಹರಿದುಬಂದಿದ್ದ ಲಕ್ಷಾಂತರ ಭಕ್ತ ಸಮೂಹದ ನಡುವೆ ಮಂಗಳವಾರ ಮುಂಜಾನೆ 4.30ರಲ್ಲಿ ಶ್ರೀಕ್ಷೇತ್ರದ ಅಧಿದೇವತೆ ಗಂಗಾಧರೇಶ್ವರಸ್ವಾಮಿ ಮೂರ್ತಿಯನ್ನು ಅಲಂಕೃತಗೊಂಡಿದ್ದ ರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರು ರಥವನ್ನು ಎಳೆದು ಹಣ್ಣು, ಜವನ ಎಸೆದು ತಮ್ಮ ಭಕ್ತಿ ಭಾವವನ್ನು ಮೆರೆದರು.ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರ ಅಡ್ಡಪಾಲಕಿ ಉತ್ಸವವೂ ಕೂಡ ಪ್ರಾರಂಭವಾಯಿತು. ಒಂದೆಡೆ ಭಕ್ತರು ರಥವನ್ನು ಎಳೆದು ಧನ್ಯರಾಗುತ್ತಿದ್ದರೆ ಮತ್ತೊಂದೆಡೆ ಸರ್ವಾಲಂಕಾರ ಭೂಷಿತರಾಗಿ ಚಿನ್ನದ ಕಿರೀಟ ಧರಿಸಿ ಪಾಲಕಿಯಲ್ಲಿ ಕುಳಿತು ದರ್ಶನ ನೀಡುತ್ತಿದ್ದ ಶ್ರೀಗಳನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು. ಶ್ರೀಗಳು ಹಸನ್ಮುಖಿಯಾಗಿ ಎಲ್ಲರಿಗೂ ದರ್ಶನಾಶೀರ್ವಾದ ನೀಡಿದರು.
9 ದಿನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಶ್ರೀಕಾಲಭೈರವೇಶ್ವರ ತಿರುಗಣಿ ಉತ್ಸವ ಮತ್ತು ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವವನ್ನು ಅಪಾರಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು. ವಿವಿಧ ಬಗೆಯ ಹೂವು ಮತ್ತು ವಿದ್ಯುತ್‌ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವಕ್ಕೆ ಪೂಜೆ ಸಲ್ಲಿಸಿದ ನಿರ್ಮಲಾನಂದನಾಥಶ್ರೀಗಳು ತೆಪ್ಪದಲ್ಲಿ ಕುಳಿತು ನೆರೆದಿದ್ದ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಿದರು.
ಈ ವೇಳೆ ಶ್ರೀ ಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಇದ್ದರು.