ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ನಿತ್ಯವೂ ಬರುವ ಲಕ್ಷ ಲಕ್ಷ ಭಕ್ತರಿಗೆ ಪ್ರಸಾದ ವಿತರಣೆಗಾಗಿ ಮಹಾದಾಸೋಹದ ಒಲೆಯನ್ನು ಶುಕ್ರವಾರ ರಾತ್ರಿ ಹೊತ್ತಿಸಲಾಗಿದ್ದು, ಅಡುಗೆ ಶುರು ಮಾಡಲಾಗಿದೆ.
ಜ. 11ರಂದು ಜಾಗೃತಿ ರ‍್ಯಾಲಿಯಲ್ಲಿ ಭಾಗವಹಿಸುವ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಮಹಾದಾಸೋಹದಲ್ಲಿ ಮಹಾಪ್ರಸಾದ ವಿತರಣೆ ನಡೆಯಲಿದೆ. ಶುಕ್ರವಾರ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಒಲೆಗೆ ವಿಶೇಷ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು.ಜ. 11ರಂದು ಮಹಾದಾಸೋಹ ಪ್ರಾರಂಭವಾಗಲಿದ್ದು, ಇದು 21 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಜಾತ್ರೆಯ ಕೊನೆಯ ದಿನವಾದ ಅಮಾವಾಸ್ಯೆಯಂದು ಮಹಾದಾಸೋಹವನ್ನು ಇಲ್ಲಿ ನಡೆಸಿ, ನಂತರ ಇದನ್ನು ದಾಸೋಹಭವನಕ್ಕೆ ಸ್ಥಳಾಂತರ ಮಾಡಲಾಗುತ್ತದೆ.
ರಥೋತ್ಸವದ ಹಿನ್ನೆಲೆಯಲ್ಲಿ ಮಹಾದಾಸೋಹವನ್ನು ಐದು ದಿನಗಳ ಮುನ್ನವೇ ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಜಾಗೃತಿ ರ‍್ಯಾಲಿಯನ್ನು ಮರಿ ಜಾತ್ರೆ ಎಂದೇ ಶ್ರೀಗಳು ಕರೆದಿದ್ದು, ಇಲ್ಲಿಂದಲೇ ಜಾತ್ರೆ ಪ್ರಾರಂಭವಾಗುತ್ತದೆ.ಗವಿಸಿದ್ದೇಶ್ವರ ಮೂರ್ತಿ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಭಾಗಿ: ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜ. 13ರಂದು ಸಂಜೆ 5ಕ್ಕೆ ಜರುಗುವ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಸಹಯೋಗದೊಂದಿಗೆ ಜನಪದ ಕಲಾ ತಂಡ ಭಾಗವಹಿಸಲಿವೆ.
ಪಲ್ಲಕ್ಕಿ ಮೆರವಣಿಗೆಯು ನಗರದ ಕೋಟೆ ಪ್ರದೇಶದ ಜಡೇಗೌಡರ ಮನೆಯಿಂದ ಆರಂಭವಾಗುವುದು. ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ಅನೇಕ ಜಾನಪದ ಕಲಾ ತಂಡ ಭಾಗವಹಿಸಲಿವೆ. ಜಾನಪದ ಕಲಾತಂಡ ಕಲಾ ಪ್ರದರ್ಶನ ಮೂಲಕ ಪಲ್ಲಕ್ಕಿ ಉತ್ಸವದ ಮೆರಗು ಹೆಚ್ಚಿಸಲಿದೆ.ಮಂಗಳೂರಿನ ಚಂಡಿ ವಾದನ, ಚಿತ್ರದುರ್ಗದ ಗೊರವರ ಕುಣಿತ, ಗೊಂಬೆ ಕುಣಿತ, ನವಿಲು ಕುಣಿತ, ಕೋಳಿ ಕುಣಿತ, ಡೊಳ್ಳು ಕುಣಿತ, ಸವಣೂರಿನ ಹಲಗೆ ಮೇಳ, ತುಮಕುರಿನ ಕಹಳೆ ಮತ್ತು ನಾಸಿಕ್ ಡೋಲ್, ಬಿನ್ನಾಳದ ಹಲಗೆ ಸಾಧನ, ಸಿರಗುಪ್ಪದ ಡೊಳ್ಳು ಕುಣಿತ, ಗೌರಾಪುರ (ಚಿಕ್ಕಮಂಗಳೂರು) ವೀರಗಾಸೆ, ಹೊಸಪೇಟೆಯ ಕೀಲು ಕುದುರೆ, ಕುಣಿಕೇರಿಯ ಝಾಂಜಮೇಳ, ಕೊಪ್ಪಳದ ಹಗಲುವೇಷ, ಚಿಲಕಮುಖಿಯ ಸಮಾಳ, ಉಪ್ಪಾರಗಟ್ಟಿಯ ನಂದಿಕೋಲು ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಲಿವೆ.ಶ್ರೀ ಗವಿಸಿದ್ಧೇಶ್ವರ ಪಲ್ಲಕ್ಕಿ ಉತ್ಸವ ಆರಂಭವಾಗುವ ಕೋಟೆ ಏರಿಯಾದಲ್ಲಿರುವ ಜಡೇಗೌಡರ ಮನೆಯಿಂದ ಶ್ರೀಮಠದ ವರೆಗೆ ಜನಪದ ಕಲಾತಂಡಗಳ ಪ್ರದರ್ಶಗಳು ಜರುಗಲಿವೆ.