ಶ್ರೀ ಗಾಯತ್ರಿ ತಪೋಭೂಮಿ ಜಾತ್ಯತೀತ ಮಠ: ಸದ್ಗುರು ದತ್ತಪ್ಪಯ್ಯ ಶ್ರೀಗಳು

KannadaprabhaNewsNetwork | Published : Apr 12, 2025 12:46 AM

ಸಾರಾಂಶ

ಈ ಗಾಯತ್ರಿ ತಪೋಭೂಮಿಯು ಜಾತ್ಯತೀತ ಮಠಕ್ಕೆ ಸಾಕ್ಷಿಕರಿಸಿದ್ದು, ಎಲ್ಲ ಧರ್ಮದ ಸದ್ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಿಂದಗಿಯ ಆದಿನಾಥ ಪರಂಪರಾಗತ ಗುರುಪೀಠದ ಭೀಮಾಶಂಕರ ಸ್ವಾಮಿ ಸಂಸ್ಥಾನಮಠದ ಸದ್ಗುರು ದತ್ತಪ್ಪಯ್ಯ ಶ್ರೀಗಳು ಹೇಳಿದರು.

ಹುಬ್ಬಳ್ಳಿ: ಮಠಗಳು ಎಂದಿಗೂ ಜಾತಿಯ ಆಧಾರದಲ್ಲಿ ನೆಲೆಯೂರಬಾರದು. ತಡಸದಲ್ಲಿ ನೆಲೆನಿಂತಿರುವ ಈ ಗಾಯತ್ರಿ ತಪೋಭೂಮಿಯು ಜಾತ್ಯತೀತ ಮಠಕ್ಕೆ ಸಾಕ್ಷಿಕರಿಸಿದ್ದು, ಎಲ್ಲ ಧರ್ಮದ ಸದ್ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಿಂದಗಿಯ ಆದಿನಾಥ ಪರಂಪರಾಗತ ಗುರುಪೀಠದ ಭೀಮಾಶಂಕರ ಸ್ವಾಮಿ ಸಂಸ್ಥಾನಮಠದ ಸದ್ಗುರು ದತ್ತಪ್ಪಯ್ಯ ಶ್ರೀಗಳು ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸದಲ್ಲಿರುವ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಶ್ರೀ ಗಾಯತ್ರಿ ಪ್ರತಿಷ್ಠಾಪನಾ ರಜತ ಮಹೋತ್ಸವದ ಸಮಾರಂಭದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಠ- ಮಂದಿರಗಳಲ್ಲಿ ಎಂದಿಗೂ ಜಾತಿ ಬರಬಾರದು. ಆದರೆ, ಇಂದು ಹಲವು ಮಠ-ಮಾನ್ಯಗಳು ಜಾತಿಯ ಆಧಾರದಲ್ಲಿಯೇ ನೆಲೆನಿಂತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ದಿ. ವಲ್ಲಭ ಚೈತನ್ಯ ಗುರುಗಳು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಭಾವರೂಪದಲ್ಲಿ ಸದಾಕಾಲ ನಮ್ಮೊಂದಿಗಿದ್ದಾರೆ. ಜಗನ್ಮಾತೆಯನ್ನು ಸಾಕ್ಷಾತ್ಕರಿಸಿಕೊಂಡ ಗುರುಗಳು ಸಾಕ್ಷಾತ್ ಗಾಯತ್ರಿ ದೇವಿಯನ್ನು ತಡಸದ ತಪೋವನ ಪುಣ್ಯಭೂಮಿಯಲ್ಲಿ ಪ್ರತಿಷ್ಠಾಪಿಸಿ ಭಕ್ತರ ಉದ್ಧಾರಕ್ಕೆ ಕಾರಣರಾಗಿದ್ದಾರೆ ಎಂದರು.

ಸಾಮಾನ್ಯರಲ್ಲಿ ಸಾಮಾನ್ಯ:

ಶ್ರೀ ವಲ್ಲಭ ಚೈತನ್ಯ ಗುರುಗಳ ಜೀವಿತಾವಧಿಯಲ್ಲಿ ಮೇಲು-ಕೀಳು, ಜಾತಿ, ಮತ ಹಾಗೂ ಪಂಥವನ್ನು ಲೆಕ್ಕಿಸದೇ ಎಲ್ಲ ಭಕ್ತರೊಂದಿಗೆ ಅಂತಃಕರಣ ಪೂರ್ವವಾಗಿ ನಡೆದುಕೊಳ್ಳುತ್ತಿದ್ದರು. ಸಾಕ್ಷಾತ್ ಗಾಯತ್ರಿ ಮಾತೆಯನ್ನು ಸಾಕ್ಷಾತ್ಕರಿಸಿಕೊಂಡಿದ್ದರೂ ಯಾವುದೇ ಹಮ್ಮು ಇಲ್ಲದೇ ಎಲ್ಲರೊಟ್ಟಿಗೆ ತಾವೂ ಒಬ್ಬರಂತೆ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು ಎಂದರು.

ಲೌಕಿಕ ಜಗತ್ತಿನ ಬಗ್ಗೆ ಪ್ರಾರ್ಥಿಸದಿರಿ:

ಸಾಧು- ಸತ್ಪುರುಷರ ಸಾನ್ನಿಧ್ಯ ಪಾತ್ರವಾದಾಗ ಮಾತ್ರ ಜೀವನ ಪಾವನವಾಗುತ್ತದೆ. ಪಾರಮಾರ್ಥಕ್ಕಾಗಿ ಮಾಡಿದ ಸೇವೆ ನೇರವಾಗಿ ಭಗವಂತನನ್ನು ತಲುಪಲಿದ್ದು, ದೇವರಲ್ಲಿ ಹಾಗೂ ಗುರುಗಳಲ್ಲಿ ಯಾವತ್ತೂ ಲೌಕಿಕ ಜಗತ್ತಿನ ಬಗ್ಗೆ ಪ್ರಾರ್ಥಿಸಬಾರದು. ಗುರುವಿನ ಮೇಲೆ ವಿಶ್ವಾಸವಿಟ್ಟು, ಸರ್ವಸ್ವವನ್ನೂ ಅವರಿಗೆ ಒಪ್ಪಿಸಿದಾಗ ದೇವರ ಕೃಪೆ ಪಾತ್ರವಾಗುತ್ತದೆ ಎಂದರು.

ಜಾಗ್ರತ ಪೀಠ:

ಯರಗಲ್ಲ ಸಂಸ್ಥಾನಮಠದ ಸದ್ಗುರು ಸಿದ್ಧರಾಜ ಶ್ರೀಗಳು ಮಾತನಾಡಿ, ಶರಣರನ್ನು ಮರಣದಲ್ಲಿ ಕಾಣು ಎಂಬ ಯುಕ್ತಿಯಂತೆ ಶ್ರೀ ವಲ್ಲಭ ಚೈತನ್ಯರ ಪುಣ್ಯದ ಕಾರ್ಯವನ್ನು ನಾವು ಈಗ ಅನುಭವಿಸುತ್ತಿದ್ದೇವೆ. ತಮಗಾಗಿ ಏನನ್ನೂ ಬಯಸದ ಗುರುಗಳು, ಪಾಮರರಿಗಾಗಿ ಅತಿ ದೊಡ್ಡ ಶಕ್ತಿಯನೇ ಪ್ರತಿಷ್ಠಾಪಿಸಿ, ತಪೋವನವನ್ನು ಜಾಗ್ರತ ಪೀಠವನ್ನಾಗಿಸಿದ್ದಾರೆ ಎಂದರು.

ಅಳಿವಿನಂಚಿಗೆ:

ಇಂದಿನ ಕಾಲಘಟ್ಟದಲ್ಲಿ ಸನಾತನ ಧರ್ಮ, ವೈದಿಕ ಪರಂಪರೆ ಅಳಿವಿನಂಚಿನಲ್ಲಿದೆ. ಸನಾತನ ಧರ್ಮದ ಪುನರ್‌ ಸ್ಥಾಪನೆಗಾಗಿ ತಡಸದಲ್ಲಿ ವೈದಿಕ ಪಾಠಶಾಲೆ ತೆರೆಯಲಾಗಿದೆ. ನಿತ್ಯ ಸಂಧ್ಯಾವಂದನೆ ಮಾಡುವುದೇ ನಾವು ಗುರುಗಳಿಗೆ ನೀಡುವ ಗೌರವ. ಪ್ರತಿಯೊಬ್ಬರೂ ತಮ್ಮ ಶಕ್ತಿಯನುಸಾರ ಕಡ್ಡಾಯವಾಗಿ ನಿತ್ಯ ಗಾಯತ್ರಿ ಮಂತ್ರ ಪಠಿಸುವ ಮೂಲಕ ನಾವೆಲ್ಲ ಭಹ್ಮ ತೇಜಸ್ಸನ್ನು ಪಡೆಯಬಹುದಾಗಿದೆ ಎಂದರು.

ಕಾರ್ಯ ಸಾಧನೆಯಿಂದ ಬ್ರಾಹ್ಮಣ:

ಸವದತ್ತಿಯ ರಾಜಾರಾಮ ಮಠದ ಶ್ರೀ ಗಂಗಾಧರ ದೀಕ್ಷಿತ ಸ್ವಾಮೀಜಿ ಮಾತನಾಡಿ, ಯಾರೂ ಹುಟ್ಟಿನಿಂದ ಬ್ರಾಹ್ಮಣ ಆಗುವುದಿಲ್ಲ. ಕಾರ್ಯ ಸಾಧನೆಯಿಂದ ಬ್ರಾಹ್ಮಣನಾಗುತ್ತಾನೆ. ಜಾತಿ- ಮತ, ಪಂಥವಿಲ್ಲದೇ ಇಲ್ಲಿ ನಿರಂತರ ಕಾರ್ಯಕ್ರಮಗಳು ನಡೆದಿದೆ. ತಾಯಿ ಗಾಯತ್ರಿ ದೇವಿ ಯಾವ ಜಾತಿಯ ಸ್ವತ್ತಲ್ಲ. ಇಲ್ಲಿ ಒಂದು ಬಾರಿ ಗಾಯತ್ರಿ ಮಂತ್ರ ಪಠಿಸಿದರೆ, 108 ಬಾರಿ ಪಠಿಸಿದ ಪುಣ್ಯಪ್ರಾಪ್ತಿಯಾಗಲಿದೆ. ಏಕನಾಥ ಮಹಾರಾಜರು ದತ್ತಾತ್ರೇಯ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡ ರೀತಿಯಲ್ಲೇ ವಲ್ಲಭ ಚೈತನ್ಯರು ಗಾಯತ್ರಿ ಮಾತೆಯನ್ನು ಒಲಿಸಿಕೊಂಡಿದ್ದರು ಎಂದರು.

ಮಾತೆಗೆ ತಲೆಬಾಗದವರಿಲ್ಲ:

ಗುರ್ಲಹೊಸೂರ ಚಿದಂಬರ ಕ್ಷೇತ್ರದ ಪ್ರಸನ್ನ ದೀಕ್ಷಿತರು ಮಾತನಾಡಿ, ತಡಸ ಪುಣ್ಯಭೂಮಿಗೆ ಬಾರದವರೇ ಇಲ್ಲ. ರಾಜಕಾರಣಿಗಳು, ಜಗದ್ಗುರುಗಳಾದಿಯಾಗಿ ಎಲ್ಲರೂ ಮಾತೆಗೆ ತಲೆಬಾಗಿದ್ದಾರೆ. ಅಂತಹ ಶಕ್ತಿ ಇಲ್ಲಿನ ಗಾಯತ್ರಿ ಮಾತೆಗಿದೆ. ವಲ್ಲಭ ಚೈತನ್ಯ ಗುರುಗಳು ಸನ್ಯಾಸ ಸ್ವೀಕಾರದ ಬಳಿಕವೂ ಅವರು ಸಾಮಾನ್ಯರಂತೆಯೇ ವರ್ತಿಸುತ್ತಿದ್ದರು. ದೈವಿ ಶಕ್ತಿಯನ್ನು ಹೊಂದಿದ್ದ ಅವರಿಗೆ ಸೌಜನ್ಯ, ಸಮಾಧಾನವೇ ದೊಡ್ಡ ವರದಾನವಾಗಿತ್ತು ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಋತ್ವಿಕರಿಂದ ಮಂತ್ರಪಠಣ, ಯಾಗ, ಕುಂಕುಮಾರ್ಚನೆ ನೆರವೇರಿತು. ಸಂಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸಭಾ ಕಾರ್ಯಕ್ರಮದ ನಂತರ ಪಾಲ್ಗೊಂಡ ಶ್ರೀಗಳನ್ನು ಶ್ರೀ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಟ್ರಸ್ಚ್‌ ಅಧ್ಯಕ್ಷ ವಿನಾಯಕ ಆಕಳವಾಡಿ ಸೇರಿದಂತೆ ಟ್ರಸ್ಟ್‌ನ ಸದಸ್ಯರು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

Share this article