ಸಮುದಾಯದ ಆಸ್ತಿ ಅನ್ಯರ ಪಾಲು

KannadaprabhaNewsNetwork |  
Published : Aug 06, 2025, 01:15 AM IST
14 | Kannada Prabha

ಸಾರಾಂಶ

ಸರ್ಕಾರ ಈಗಾಗಲೇ ನಾಗಮೋಹನ ದಾಸ್ ವರದಿಯನ್ನು ಅಂಗೀಕರಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 9.60 ಲಕ್ಷ ಮಂದಿ ತಮ್ಮ ಜಾತಿಯನ್ನು ನಮೂದಿಸಿಲ್ಲ. ಇದರಿಂದ ಸಮುದಾಯದ ಆಸ್ತಿ ಬೇರೆಯವರ ಪಾಲಾಗಲಿದೆ ಎಂದು ಶ್ರೀ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಗರದ ಅಶೋಕ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಆದಿ ಕರ್ನಾಟಕ ಮಹಾಸಂಸ್ಥಾನ ಗುರುಪೀಠದ ಶ್ರೀ ಜ್ಞಾನ ಸ್ವರೂಪಾನಂದ ಸ್ವಾಮೀಜಿ ಅವರ ಪ್ರಥಮ ವರ್ಷದ ಸನ್ಯಾಸ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಮಾಜದ ಏಳಿಗೆಗಾಗಿ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಈಗಾಗಲೇ ನಾಗಮೋಹನ ದಾಸ್ ವರದಿಯನ್ನು ಅಂಗೀಕರಿಸಿದೆ. ಕೋಟ್ಯಾಂತರ ರೂ. ಖರ್ಚು ಮಾಡಿ ರಾಜ್ಯ ಸುತ್ತಿ ಸೆಮಿನಾರ್ ಮಾಡಿದರೂ ನಮ್ಮ ಜನ ಎಚ್ಚೆತ್ತುಕೊಳ್ಳಲಿಲ್ಲ. ಬೆಂಗಳೂರು ನಗರದಲ್ಲೇ 7 ಲಕ್ಷ ಹಾಗೂ ಗ್ರಾಮೀಣ ಭಾಗದಲ್ಲಿ 2 ಲಕ್ಷ ಮಂದಿ ಜಾತಿ ನಮೂದಿಸಿಲ್ಲ. ಸಮಾಜದ ಹಿತ ಕಾಯಬೇಕಾದ ಮುಂಚೂಣಿ ನಾಯಕರು, ಸಮುದಾಯವನ್ನು ರಕ್ಷಿಸಬೇಕಾದವರು ಕೈಚೆಲ್ಲಿ ಕುಳಿತರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ವಿಷಾದಿಸಿದರು.

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 9.60 ಲಕ್ಷ ಮಂದಿ ತಮ್ಮ ಜಾತಿ ನಮೂದಿಸಿಲ್ಲ. ಇದರಿಂದ ಯಾವ ಕಡೆಗೆ ಪರಿಶಿಷ್ಟ ಸಮುದಾಯ ಸಾಗುತ್ತಿದೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ನಮ್ಮವರೇ ನಮ್ಮ ಸಮಾಜವನ್ನು ಸಮಾಧಿ ವಾಡಲು ಹೋರಟಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಎಲ್ಲಾ ಜಾತಿ- ಸಮುದಾಯಗಳು ಒಗ್ಗಟ್ಟಿನ ಮಂತ್ರ ಜಪಿಸುವಾಗ ನಾವುಗಳು ಯಾವ ಕಡೆಗೆ ಚಲಿಸುತ್ತಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ. ರಾಜಕೀಯ ಅಸ್ಪಷ್ಟತೆಯಿಂದ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಡಾ.ಬಿ.ಆರ್. ಅಂಬೇಡ್ಕರ್ ಹೇಳಿರುವಂತಹ ಬುದ್ಧ ಧಮ್ಮ ಹಾಗೂ ಸಂಘಕ್ಕೆ ಶರಣಾಗಲಿಲ್ಲವೆಂದರೆ ನಾವು ಅವರಿಗೆ ಮಾಡಿದ ದ್ರೋಹವಾಗಲಿದೆ ಎಂದು ಅವರು ಎಚ್ಚರಿಸಿದರು.

ಆದಿ ಕರ್ನಾಟಕ ಮಹಾಸಂಸ್ಥಾನ ಗುರುಪೀಠದ ಶ್ರೀ ಡಾ. ಜ್ಞಾನಸ್ವರೂಪಾನಂದ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್ ಮೊದಲಾದವರು ಇದ್ದರು.

----

ಕೋಟ್...

ಒಂದು ಸಮುದಾಯ 9 ಬಾರಿ ಮುಖ್ಯಮಂತ್ರಿಯಾದರು. ಇನ್ನೊಂದು ಸಮುದಾಯದವರು 7 ಬಾರಿ ಮುಖ್ಯಮಂತ್ರಿಯಾದರು, ಮತ್ತೊಂದು ಸಮುದಾಯ 2 ಬಾರಿ ಮುಖ್ಯಮಂತ್ರಿಯಾದರು. ಅವರ್ಯಾರೂ ಮುಖ್ಯಮಂತ್ರಿಯಾಗಿ ಸುಮ್ಮನೆ ಕುಳಿತಿಲ್ಲ. 1600 ಎಕರೆ ಭೂಮಿಯನ್ನು ಮಠಗಳಿಗೆ ಕೊಟ್ಟಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಠಗಳಿಗೆ 28 ಕೋಟಿ ರೂ. ಹೋಗಿದೆ.

- ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ