ಭಕ್ತ ಸಾಗರದ ಮಧ್ಯ ಜರುಗಿದ ಶ್ರೀಗುರುಕೊಟ್ಟೂರೇಶ್ವರ ಮಹಾರಥೋತ್ಸವ

KannadaprabhaNewsNetwork | Published : Feb 23, 2025 12:34 AM

ಸಾರಾಂಶ

ಮೆರವಣಿಗೆ ಶ್ರೀಸ್ವಾಮಿಯ ರಥದ ಸುತ್ತಲೂ ಮೂರು ಬಾರಿ ಪ್ರದಕ್ಷಣೆ ಮಾಡಿದ ನಂತರ ಶ್ರೀಸ್ವಾಮಿಯನ್ನು ಪೂಜಾಕರ್ತ ಬಳಗದವರು ಹೊತ್ತೊಯ್ದು ರಥದಲ್ಲಿ ಆಸೀನ ಪಡಿಸಿದರು

ಜಿ.ಸೋಮಶೇಖರ ಕೊಟ್ಟೂರು

ಮೂಡಣದಲ್ಲಿ ಸೂರ್ಯಾಸ್ತವಾಗುವ ಸಮಯದಲ್ಲಿ ರಾಜ್ಯದಲ್ಲಿಯೇ ಅತಿ ಎತ್ತರದ ರಥ ( 85 ಅಡಿ) ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತಸಾಗರದ ಮಧ್ಯೆ ಶನಿವಾರ ಸಂಜೆ ಮೂಲಾ ನಕ್ಷತ್ರದ ಸಂದರ್ಭದಲ್ಲಿ 5.56ಕ್ಕೆ ವಿಜೃಂಭಣೆಯಿಂದ ಜರುಗಿತು.

ಇದಕ್ಕೂ ಮುನ್ನ ಶ್ರೀಸ್ವಾಮಿಗೆ ಮಧ್ಯಾಹ್ನ ಪೂಜೆ ನೆರವೇರಿದ ನಂತರ ಹಿರೇಮಠದಲ್ಲಿನ ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಸಕಲ ಬಿರುದಾವಳಿಯೊಂದಿಗೆ ಪೂಜಾ ಕರ್ತರು ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿದ ನಂತರ ಮೆರವಣಿಗೆ ತೇರು ಬಯಲಿನವರೆಗೆ ಸಾಗುವ ಮುನ್ನ ಹರಿಜನ ಕೇರಿ ಬಳಿ ಬರುತ್ತಿದ್ದಂತೆ ಇಬ್ಬರು ದಲಿತ ಮಹಿಳೆಯರು ಶ್ರೀಸ್ವಾಮಿಗೆ ಕಳಸದಾರತಿ ಮತ್ತು ದೀಪದಾರತಿ ಬೆಳಗಿದರು. ನಂತರ ಮೆರವಣಿಗೆ ಗುಂಟಾ ತೇರು ಬಜಾರ್‌ ಮೂಲಕ ಬಯಲಿಗೆ ಬಂದಿತು.

ಮೆರವಣಿಗೆ ಶ್ರೀಸ್ವಾಮಿಯ ರಥದ ಸುತ್ತಲೂ ಮೂರು ಬಾರಿ ಪ್ರದಕ್ಷಣೆ ಮಾಡಿದ ನಂತರ ಶ್ರೀಸ್ವಾಮಿಯನ್ನು ಪೂಜಾಕರ್ತ ಬಳಗದವರು ಹೊತ್ತೊಯ್ದು ರಥದಲ್ಲಿ ಆಸೀನ ಪಡಿಸಿದರು. ಸಂಜೆ ಮೂಲಾ ನಕ್ಷತ್ರದ ಸಮಯವಾದ 5.56ಕ್ಕೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ದೊರಕಿತು. ಈ ಪ್ರಕ್ರಿಯೆ ನಡೆಯುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ಏಕ ಸ್ವರದಲ್ಲಿ ಕೊಟ್ಟೂರು ದೊರೆಯೇ ನಿನಗಾರು ಸರಿಯೇ ಎಂಬ ಜಯ ಘೋಷಣೆ ಕೂಗುತ್ತ ರಥ ಏಳೆದರು.

ಆಕರ್ಷಕ ಸಮಾಳ, ನಂದಿಕೋಲು ಕುಣಿತ, ಮತ್ತಿತರ ವಾದ್ಯಗಳ ನಿನಾದಕ್ಕೆ ಅನುಗುಣವಾಗಿ ಭಕ್ತರು ಕುಣಿದಾಡಿ ಸಂಭ್ರಮಿಸಿದರು. ರಥ ರಾಜ ಗಾಂಭೀರ್ಯದಿಂದ ಪಾದಗಟ್ಟೆವರೆಗೂ ಸಾಗಿ ಪುನಃ ವಾಪಸ್ ತೇರು ಗಡ್ಡೆಯ ಬಳಿಯ ನಿಗದಿತ ಸ್ಥಳದಲ್ಲಿ ಸಂಜೆ ೭ಕ್ಕೆ ಬಂದು ತಲುಪಿತು. ರಥದಲ್ಲಿ ಕ್ರಿಯಾಮೂರ್ತಿ ಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಎಂ.ಕೆ. ಶೇಖರಯ್ಯ ಮತ್ತಿತರರು ಇದ್ದರು.

ರಥೋತ್ಸವದಲ್ಲಿ ವಿಜಯನಗರ ಎಸ್ಪಿ ಶ್ರೀಹರಿಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಕೊಟ್ಟೂರೇಶ್ವರ ಮಹಾರಥೋತ್ಸವ ಮಧ್ಯೆ ಕರ್ನಾಟಕ ಭಾಗದ ಮಿನಿ ಕುಂಭಮೇಳದಂತೆ ಭಾಸವಾಯಿತು. ಶ್ರೀಸ್ವಾಮೀಯ ರಥೋತ್ಸವವನ್ನು ಸುಮಾರು ೧೫ ವರ್ಷಗಳಿಂದ ವೀಕ್ಷಿಸುತ್ತ ಬಂದಿರುವೆ. ಪ್ರತಿ ವರ್ಷ ಜನಸ್ಥೋಮ ಹೆಚ್ಚಾಗಿ ಪಾಲ್ಗೊಳ್ಳುವುದು ಶ್ರೀಸ್ವಾಮೀಯಲ್ಲಿ ಇರಿಸಿರುವ ಪರಮ ಭಕ್ತಿ ತೋರಿಸುತ್ತದೆ ಎಂದು ದಾವಣಗೆರೆ ಭಕ್ತ ಚಂದ್ರಶೇಖರ ಹೇಳಿದ್ದಾರೆ.

Share this article