ಲಕ್ಷ್ಮೇಶ್ವರ: ಸಮಾನತೆ, ಕಾಯಕ ತತ್ವ ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎನ್ನುವುದು ಬಸವಣ್ಣನವರ ದೃಷ್ಟಿಕೋನವಾಗಿತ್ತು. ಕಾಯಕವೇ ಕೈಲಾಸ ಎಂಬುದು ಅವರು ಜಗತ್ತಿಗೆ ನೀಡಿದ ನಿತ್ಯ ಸತ್ಯ ಮಂತ್ರವಾಗಿದೆ ಎಂದು ಲಕ್ಷ್ಮೇಶ್ವರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4ರ ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ ಹೇಳಿದರು.
12ನೇ ಶತಮಾನದಲ್ಲಿ ಬಾಳಿ ಹೋದ ಶರಣರು ಆದರ್ಶ ಮತ್ತು ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶರಣ ನುಡಿಗಳನ್ನು ಹೇಳುವುದು ಕಾಯಕವಾಗಿದೆ, ಆದರೆ ಅನುಸರಣೆ ಮಾಯವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಶರಣರು ತತ್ವ-ವಿಚಾರಗಳನ್ನು ಕೇವಲ ಬಾಯಿಮಾತಿನಲ್ಲಿ ಹೇಳಲಿಲ್ಲ, ಅದರ ಬದಲಾಗಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯ ಜೀವನದ ಹಾದಿ ತೋರಿಸಿದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಂಜಿನಿಯರ್ ಮಹೇಶ ಸೋಮಕ್ಕನವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಂತಹ ದತ್ತಿ ಕಾರ್ಯಕ್ರಮಗಳ ಮೂಲಕ ದತ್ತಿದಾನಿಗಳನ್ನು ತಪ್ಪದೇ ಪ್ರತಿ ವರ್ಷ ಸ್ಮರಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸಂಗಮೇಶ ಅಂಗಡಿ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕಾರ್ಯ ಇಂದಿನ ಅಗತ್ಯತೆಯಾಗಿದೆ. ನಮ್ಮ ಸಂಸ್ಕೃತಿ ನಮ್ಮ ಬೇರು. ಬೇರು ಸದೃಢವಾಗಿದ್ದರೆ ಮೊಗ್ಗರಳಿ ಹೂವಾಗಿ ಪರಿಮಳಿಸಲು ಸಾಧ್ಯ ಎಂದರು.
ಸಿಆರ್‌ಪಿ ಗಿರೀಶ ನೇಕಾರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಆರ್.ಎನ್. ಪಂಚಬಾವಿ, ಸಮಾಜ ಸೇವಾ ರತ್ನ ಪುರಸ್ಕೃತ ಕರಿಯಪ್ಪ ಶಿರಹಟ್ಟಿ, ಗ್ರಾಮೀಣ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವಾನಂದ ಅಸುಂಡಿ, ಶ್ರೀಕಾಂತ ನಂದೆಣ್ಣವರ, ಪೀರಸಾಬ ನದಾಫ್, ಉಪಾಸಿ, ಸಂಗಮೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀನಿಧಿ ಶಂಕರ ಶಿಳ್ಳಿನ, ಅಮೃತಾ ಕಾಯಿಶೆಟ್ಟಿ, ವಿ.ಎಂ. ಹೂಗಾರ ವಚನ ಗಾಯನ ನಡೆಸಿಕೊಟ್ಟರು.
ಕಸಾಪ ತಾಲೂಕು ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಎನ್.ಎಸ್. ಪವಾಡಶೆಟ್ರ ವಂದಿಸಿದರು.