ಸವಣೂರು: ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಾನು ಕ್ಷೇತ್ರದ ಅಭಿವೃದ್ಧಿಯನ್ನು ಪ್ರಮುಖ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದಾಗಿ ಕ್ಷೇತ್ರದ ಶಾಸಕ ಯಾಸೀರ ಅಹ್ಮದ ಖಾನ ಪಠಾಣ ಹೇಳಿದ್ದಾರೆ. ಪಟ್ಟಣದ ಹೊರವಲಯದ ಮೋತಿತಲಾಬ ಕೆರೆಯ ಕೋಡಿ ಬೀಳುವ ಸ್ಥಳದಲ್ಲಿ ಸವಣೂರು ಪಟ್ಟಣದ ಮೋತಿ ತಲಾಬ ಕೆರೆಗೆ ಪೈಪ್‌ಲೈನ್ ಅಳವಡಿಸುವುದು ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರೈತ ಸಂಘದ ಮುಖಂಡರು ಹಾಗೂ ಹಿರಿಯರು ನೀಡಿದ ಮಾರ್ಗಸೂಚಿ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಅದರಂತೆ ಈಗಾಗಲೇ ಸುಮಾರು ₹1100 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ ಎಂದು ಹೇಳಿದರು.ಪಟ್ಟಣದಲ್ಲಿ ₹5 ಕೋಟಿ ವೆಚ್ಚದಲ್ಲಿ ವಾಕಿಂಗ್ ಟ್ರ‍್ಯಾಕ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಕೆರೆ ಅಭಿವೃದ್ಧಿಯೊಂದಿಗೆ ಹೆಚ್ಚುವರಿ ನೀರು ಸಂಗ್ರಹಿಸಿ ನೀರಾವರಿ ಉದ್ದೇಶಗಳಿಗೆ ಬಳಸುವ ಯೋಜನೆಯನ್ನೂ ರೂಪಿಸಲಾಗಿದೆ. ಕಳಲಕೊಂಡ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿನ ಲಭ್ಯತೆ ಇದ್ದರೂ ಕೆರೆ ಅಭಿವೃದ್ಧಿಯ ಕೊರತೆಯಿಂದ ಸಮರ್ಪಕ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಇತಿಹಾಸ ಪ್ರಸಿದ್ಧ ಮೋತಿ ತಲಾಬ ಸೇರಿದಂತೆ ಪಟ್ಟಣದ ಪ್ರಮುಖ ಕೆರೆಗಳ ಅಭಿವೃದ್ಧಿಗೆ ₹159 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ಕೇವಲ ಶೇ. 25 ನೀರು ಸಂಗ್ರಹ ಸಾಮರ್ಥ್ಯ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಶೇ. 100ರಷ್ಟು ನೀರು ಸಂಗ್ರಹ ಸಾಧ್ಯವಾಗಲಿದೆ. ಮಳೆ ಕೊರತೆ ಉಂಟಾದರೂ ಮೂರು ವರ್ಷಗಳ ವರೆಗೆ ಕೆರೆಗಳು ಖಾಲಿಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಇತಿಹಾಸ ಪ್ರಸಿದ್ಧ ಸವಣೂರು ಪಟ್ಟಣದ ಅಭಿವೃದ್ಧಿಗೆ 78 ವರ್ಷಗಳ ಬಳಿಕ ಸಮಗ್ರ ಯೋಜನೆ ರೂಪುಗೊಂಡಿದೆ. ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಸವಣೂರ ಪಟ್ಟಣಕ್ಕೆ ಪ್ರಸ್ತುತ 20 ದಿನಗಳಿಗೊಮ್ಮೆ ಮಾತ್ರ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ಶುದ್ಧ ನೀರು ಪೂರೈಕೆ ಮಾಡುವ ಉದ್ದೇಶದಿಂದ ಯೋಜನೆ ಜಾರಿಗೊಳ್ಳುತ್ತಿದೆ. ಬೇಸಿಗೆ ಕಾಲದಲ್ಲಿ ಜನರು ಶುದ್ಧ ನೀರನ್ನು ಬಳಸುವಂತೆ ನದಿ ನೀರು ಆಧಾರಿತ ಯೋಜನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಜೆ. ಮುಲ್ಲಾ, ಪುರಸಭೆ ಮಾಜಿ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ, ರೈತ ಮುಖಂಡರಾದ ಬಾಬು ಫರಾಶ, ನಾಗರಾಜ ಬಂಕಾಪುರ, ಜಾಕೀರ ಅಹ್ಮದ ಪರಾಶ, ಪ್ರಮುಖರಾದ ಲಕ್ಷ್ಮಣ ಕನವಳ್ಳಿ, ಕುಮಾರಸ್ವಾಮಿ ಅಡವಿಸ್ವಾಮಿಮಠ, ರಾಘು ಬಾಲೆಹೊಸೂರ, ವೆಂಕಟೇಶ್ ಉಂಡ್ವಲ್ಲಿ ಇದ್ದರು.
ಸವಣೂರು ಕ್ಷೇತ್ರದ ಅಭಿವೃದ್ಧಿಯೇ ಪ್ರಮುಖ ಗುರಿ: ಯಾಸೀರ ಅಹ್ಮದ ಖಾನ ಪಠಾಣ
ಸವಣೂರು ಪಟ್ಟಣದ ಹೊರವಲಯದ ಮೋತಿತಲಾಬ ಕೆರೆಯ ಕೋಡಿ ಬೀಳುವ ಸ್ಥಳದಲ್ಲಿ ಸವಣೂರು ಪಟ್ಟಣದ ಮೋತಿ ತಲಾಬ ಕೆರೆಗೆ ಪೈಪ್‌ಲೈನ್ ಅಳವಡಿಸುವುದು ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಾಸೀರ ಅಹ್ಮದ ಖಾನ ಪಠಾಣ ಭೂಮಿಪೂಜೆ ನೆರವೇರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.