ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಪ್ರಸಿದ್ಧ ಐತಿಹಾಸಿಕ ಅಗರ-ಮಾಂಬಳ್ಳಿ ಗ್ರಾಮದ ಶ್ರೀ ಹಿಂಡಿಮಾರಮ್ಮನ ಜಾತ್ರಾ ಮಹೋತ್ಸವವು ಮಂಗಳವಾರದಂದು ಆರಂಭಗೊಳ್ಳಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಗರ ನಾಡುದೇಶದ ಗೌಡರಾದ ಬಿ. ಪುಟ್ಟಸುಬ್ಬಣ್ಣ ಮಾಹಿತಿ ನೀಡಿದರು.ದೇಗುಲದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಮೊದಲನೆ ದಿನದ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಅ.22 ರಂದು ಕೇಲು ಉತ್ಸವ ನಡೆಯಲಿದೆ. ಅ.23 ರಂದು ಜಾತ್ರೆ ಹಾಗೂ ಕೊಂಡೋತ್ಸವ ನಡೆಯಲಿದೆ ಎಂದರು.
ನಂತರ ಉತ್ಸವಮೂರ್ತಿಯ ವೈಭವದ ಮೆರವಣಿಗೆ ನಡೆಯಲಿದ್ದು, ಅ.24 ರಂದು ದೂಳು ಮೆರವಣಿಗೆ ಮೂಲಕ ಈ ನಾಲ್ಕು ದಿನಗಳ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಮಾಹಿತಿ ನೀಡಿದರು. ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ ಮಾತನಾಡಿ, ದೀಪಾವಳಿ ಹಬ್ಬದಂದು ಆರಂಭವಾಗುವ ತಾಲೂಕಿನ ಅಗರ- ಮಾಂಬಳ್ಳಿ ಗ್ರಾಮದ ಹಿಂಡಿಮಾರಮ್ಮನ ದೇವರ ಹಬ್ಬವು 4 ದಿನಗಳ ಕಾಲ ನಡೆಯುತ್ತದೆ ಎಂದರು.ಈ ಹಬ್ಬವು ಪ್ರಮುಖವಾಗಿ ಅಗರ-ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸವಾಪುರ, ಬನ್ನಿಸಾರಿಗೆ, ಚಿಕ್ಕ ಉಪ್ಪಾರಬೀದಿ ಗ್ರಾಮಗಳಲ್ಲಿ ಆಚರಣೆ ಮಾಡುತ್ತಾರೆ. ಹಬ್ಬದ ಮೊದಲ ದಿನ ಹಿಂಡಿಮಾರಮ್ಮದೇವಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಗುತ್ತದೆ. ನಂತರ ಅಗರ ಮಾಂಬಳ್ಳಿ ಗ್ರಾಮಗಳಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಅಗರ ಮಾಂಬಳ್ಳಿ ಗ್ರಾಮಸ್ಥರು ಕೊಂಡೋತ್ಸವಕ್ಕಾಗಿ ಸೌದೆಗಳನ್ನು ತಂದು ಸಿದ್ಧತೆ ಮಾಡುತ್ತಾರೆ. ಇದಾದ ಮಾರನೆ ದಿನ ಸಂಜೆ ಅಗರ ಗ್ರಾಮದ ರಸ್ತೆ ಬಳಿಯಲ್ಲೇ ಕೊಂಡೋತ್ಸವ ಜರುಗಲಿದೆ. ಕೊಂಡಕ್ಕೆ ಹರಕೆ ಹೊತ್ತ ಭಕ್ತರು ಉಪವಾಸ ಮಾಡುವುದಲ್ಲದೇ ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಭಾಗವಹಿಸುವ ಮೂಲಕ ಹರಕೆ ತೀರಿಸುತ್ತಾರೆ. 4 ದಿನಗಳ ಕಾಲ ಹಿಂಡಿ ಮಾರಮ್ಮನ ಹಬ್ಬವು ನಡೆದು ಕೊಂಡೋತ್ಸವ ಮೂಲಕ ತೆರೆ ಬೀಳಲಿದೆ.ಈ ಉತ್ಸವದಲ್ಲಿ ಹೊರ ರಾಜ್ಯ ಜಿಲ್ಲೆಗಳಿಂದ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ದೇಗುಲದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇಗುಲದ ಆಡಳಿತ ಮಂಡಳಿಯಿಂದ ಎಲ್ಲಾ ತಯಾರಿಗಳೂ ನಡೆದಿವೆ ಎಂದು ಮಾಹಿತಿ ನೀಡಿದರು. ಈ ಬಾರಿ ನಡೆಯುವ ಜಾತ್ರೆಯ ನಿಮಿತ್ತ ಗ್ರಾಮದಲ್ಲಿ ಫ್ಲೆಕ್ಸ್ ಅಳವಡಿಸುವ ಹಾಗಿಲ್ಲ. ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಮಾರಾಟಗಾರರಿಗೆ ಮನವಿ ಮಾಡಲಾಗಿದೆ, ಜತೆಗೆ ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮಾರ, ಕೆಲವೆಡೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಭಕ್ತರಿಗೆ ದೇವಿಯ ದರ್ಶನ ಮಾಡಲು ಸುಲಭವಾಗವಂತೆ ಕ್ರಮ ವಹಿಸಲಾಗುವುದು ಎಂದರು. ನಾಡುದೇಶದ ರಮೇಶಪ್ಪ, ಮಹದೇವಸ್ವಾಮಿಶೆಟ್ಟ್ರಿ, ರವಿಕುಮಾರ್‌ಶೆಟ್ಟಿ, ರವಿ, ಗೋವಿಂದನಾಯಕ, ಪುಟ್ಟಸ್ವಾಮಿ, ಬಸವರಾಜು, ನಂಜುಂಡಸ್ವಾಮಿ, ಮಹದೇವಪ್ಪ, ರವಿ, ಶ್ರೀನಿವಾಸ್, ಶಿವಮಲ್ಲುಶೆಟ್ಟಿ, ಜಿ.ಪಂ. ಉಪಾಧ್ಯಕ್ಷ ಸಿದ್ದರಾಜು, ನಾರಾಯಣಸ್ವಾಮಿ, ಕೃಷ್ಣಮೂರ್ತಿ, ವಿ. ವೆಂಕಟೇಶ್, ಶಂಕರಪ್ಪ ಸೇರಿದಂತೆ ವಿವಿಧ ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು.