ಚನ್ನಗಿರಿಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ರಥೋತ್ಸವ ಸಂಪನ್ನ

KannadaprabhaNewsNetwork | Published : Apr 19, 2025 12:34 AM

ಸಾರಾಂಶ

ಪಟ್ಟಣದ ಕಲ್ಲುಸಾಗರ ಬೀದಿಯ ಬಸವೇಶ್ವರ ದೇವಾಲಯ ಹಿಂಭಾಗದ ಹಿರೇಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಶ್ರೀ ಜಗದ್ಗುರು ಪಂಚಾಚಾರ್ಯ ರಥೋತ್ಸವ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ವಿಜೃಂಭಣೆಯಿಂದ ನೆರವೇರಿತು.

- ಪ್ರತ್ಯೇಕ ಹಗ್ಗಗಳ ಹಿಡಿದು ರಥ ಎಳೆದ ಪುರುಷರು, ಮಹಿಳೆಯರು

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಕಲ್ಲುಸಾಗರ ಬೀದಿಯ ಬಸವೇಶ್ವರ ದೇವಾಲಯ ಹಿಂಭಾಗದ ಹಿರೇಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಶ್ರೀ ಜಗದ್ಗುರು ಪಂಚಾಚಾರ್ಯ ರಥೋತ್ಸವ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವ ನಿಮಿತ್ತ ಶ್ರೀ ಮಠದ ಆವರಣದಲ್ಲಿರುವ ಶ್ರೀ ಪಂಚಾಚಾರ್ಯರ ಮೂರ್ತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ, ಭದ್ರಕಾಳಿ ದೇವರಿಗೆ ಶುಕ್ರವಾರ ಬೆಳಗ್ಗೆ ಅಭಿಷೇಕದೊಂದಿಗೆ ಹೂವಿನ ಅಲಂಕಾರ ನೆರವೇರಿಸಿ, ಪೂಜಿಸಲಾಯಿತು.

ಶ್ರೀ ಪಂಚಾಚಾರ್ಯ ಅವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದಾಗ ಭಕ್ತರು ಮಾನವಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಘೋಷಣೆಗಳನ್ನು ಮೊಳಗಿಸಿದರು. ಒಂದು ಬದಿಯಲ್ಲಿ ಮಹಿಳಾ ಭಕ್ತರು, ಮತ್ತೊಂದು ಬದಿಯಲ್ಲಿ ಪುರುಷ ಭಕ್ತರು ರಥದ ಹಗ್ಗಗಳನ್ನು ಹಿಡಿದು ಎಳೆಯುತ್ತಾ ರಥೋತ್ಸವ ಮೂಲಕ ಭಕ್ತಿ ಮೆರೆದರು. ಈ ವೇಳೆ ಭಕ್ತರು ರಥಕ್ಕೆ ಮಂಡಕ್ಕಿ, ಉತ್ತುತ್ತಿ, ಬಾಳೆಹಣ್ಣುಗಳನ್ನು ಎಸೆಯುತ್ತಾ ಭಕ್ತಿ ಸಮರ್ಪಿಸಿದರು.

ರಥೋತ್ಸವಕ್ಕೆ ಎಡೆಯೂರು ಶ್ರೀ ರೇಣುಕಾಶಿವಾಚಾರ್ಯ ಮಹಾಸ್ವಾಮಿಗಳು, ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಮಹಾಸ್ವಾಮೀಜಿ, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ವೀರಶೈವ ಸಮಾಜದ ಮುಖಂಡರಾದ ರಾಜಶೇಖರಯ್ಯ, ಎಲ್.ಎಂ.ರೇಣುಕಾ, ಜ್ಯೋತಿ ಕೊಟ್ರೇಶ್ ಕೋರಿ, ಸಿ.ಎಂ.ಗುರುಸಿದ್ದಯ್ಯ, ಭಕ್ತರು ಹಾಜರಿದ್ದರು. ಶ್ರೀ ಮಠದ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

- - - -18ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಕಲ್ಲುಸಾಗರ ಬೀದಿಯ ಬಸವೇಶ್ವರ ದೇವಾಲಯ ಹಿಂಭಾಗದಲ್ಲಿರುವ ಹಿರೇಮಠ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಶ್ರೀ ಜಗದ್ಗುರು ಪಂಚಾಚಾರ್ಯ ರಥೋತ್ಸವ ನಡೆಯಿತು.

Share this article