ಭಕ್ತ ಸಮೂಹದ ಜಯಘೋಷಗಳ ನಡುವೆ ಸಂಪನ್ನಗೊಂಡ ಶ್ರೀಕನಕದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವ

KannadaprabhaNewsNetwork | Published : Mar 12, 2025 12:52 AM

ಸಾರಾಂಶ

ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿಯ ಸಿಡಿಬಂಡಿ ರಥೋತ್ಸವ ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ಮಂಗಳವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಆಗಮಿಸಿ ಸಿಡಿಬಂಡಿ ರಥೋತ್ಸವ ಕಣ್ತುಂಬಿಕೊಂಡರು

ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಭಕ್ತರು

ಶ್ರೀಕನಕ ದುರ್ಗಮ್ಮದೇವಿಗೆ ಚಿನ್ನದ ಆಭರಣಗಳ ಅಲಂಕಾರ; ವಿಶೇಷ ಪೂಜಾ ಕೈಂಕರ್ಯ

ದೇವಸ್ಥಾನ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಸಿಡಿಬಂಡಿ ರಥೋತ್ಸವ

ಕನ್ನಡಪ್ರಭ ವಾರ್ತೆ ಬಳ್ಳಾರಿನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿಯ ಸಿಡಿಬಂಡಿ ರಥೋತ್ಸವ ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ಮಂಗಳವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.ನಗರದ ಕೌಲ್‌ಬಜಾರ್‌ನ ಗಾಣಿಗ ಸಮುದಾಯದವರು ನಿರ್ಮಿಸಿ ತಂದಿದ್ದ ಸಿಡಿಬಂಡಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಿಡಿಬಂಡಿಯನ್ನು ಹೊತ್ತ ಎತ್ತುಗಳು ಶ್ರೀಕನಕ ದುರ್ಗಮ್ಮ ದೇವಸ್ಥಾನ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವ ಸಂಪನ್ನಗೊಂಡಿತು. ಇದೇ ವೇಳೆ ಭಕ್ತ ಸಮೂಹ ಹೂ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರೆ, ಮತ್ತೆ ಕೆಲವರು ಜೀವಂತ ಕೋಳಿಗಳನ್ನು ಸಿಡಿಬಂಡಿಗೆ ತೂರುವ ಮೂಲಕ ಹರಕೆ ತೀರಿಸಿದರು.

ಸಿಡಿಬಂಡಿ ರಥೋತ್ಸವದ ದೃಶ್ಯವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದ ಭಕ್ತರು ಸಿಡಿಬಂಡಿ ವೈಭವವನ್ನು ಕಣ್ತುಂಬಿಕೊಂಡು ಭಾವಪರವಶರಾದರು. ಒಂದೆಡೆ ಸಿಡಿಬಂಡಿ ದೇವಸ್ಥಾನ ಸುತ್ತು ಹಾಕುತ್ತಿದ್ದರೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಶ್ರೀಕನಕ ದುರ್ಗ ದೇವಿಗೆ ಜಯಘೋಷ ಹಾಕಿದರು.ಕನಕ ದುರ್ಗಮ್ಮದೇವಿಗೆ ಚಿನ್ನದ ಅಲಂಕಾರ:

ರಥೋತ್ಸವ ಹಿನ್ನೆಲೆ ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಚಿನ್ನದ ಆಭರಣಗಳಿಂದ ಅಲಂಕೃತಗೊಳಿಸಲಾಗಿದ್ದ ದೇವಿಯ ಮೂರ್ತಿಗೆ ಭಕ್ತರು ಕುಂಕುಮಾರ್ಚನೆ ಸಲ್ಲಿಸಿ ಕೃತಾರ್ಥಗೊಂಡರೆ, ಹರಕೆ ಹೊತ್ತ ಭಕ್ತರು ನಗರದ ನಾನಾ ಭಾಗಗಳಿಂದ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಬಂದು ಭಕ್ತಿ ಸಮರ್ಪಿಸಿದರು.ದೇವಿಯ ದರ್ಶನ ಪಡೆಯಲು ದೇವಸ್ಥಾನದಲ್ಲಿ ಬೆಳಿಗಿನ ಜಾವದಿಂದಲೇ ಭಕ್ತರು ಆಗಮಿಸುತ್ತಿರುವ ದೃಶ್ಯಗಳು ಕಂಡು ಬಂದವು. ದರ್ಶನಕ್ಕೆ ನೂಕು ನುಗ್ಗಲಾಗದಂತೆ ಆವರಣದಲ್ಲಿ ಬ್ಯಾರಿಕೇಡ್‌ ನಿರ್ಮಿಸಲಾಗಿತ್ತು.

ಸೋಮವಾರ ರಾತ್ರಿಯಿಂದಲೇ ದೂರದ ಊರಿನಿಂದ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದುಬಂದಿತ್ತು. ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ನೆರಳಿನ ವ್ಯವಸ್ಥೆ, ಕುಡಿವ ನೀರು, ಮಜ್ಜಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.ಭಕ್ತರ ನಿಯಂತ್ರಿಸಲು ಹಾಗೂ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು. ದೇವರ ದರ್ಶನಕ್ಕಾಗಿ ಬರುವ ಭಕ್ತರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಿಡಿಬಂಡಿ ರಥೋತ್ಸವ ಮತ್ತಷ್ಟೂ ಸಂಭ್ರಮವನ್ನಾಗಿಸಲು ದೇವಸ್ಥಾನದ ಗೋಪುರಗಳು ಹಾಗೂ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಕತ್ತಲಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳಿಂದ ನಗರದ ರಸ್ತೆಗಳು ಹಾಗೂ ದೇವಸ್ಥಾನದ ಗೋಪುರಗಳು ಝಗಮಗಿಸಿದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಿಡಿಬಂಡಿ ರಥೋತ್ಸವಕ್ಕೆ ಜಿಲ್ಲೆಯ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ನಾರಾ ಭರತ್‌ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕರಾದ ಕೆ.ಸಿ. ಕೊಂಡಯ್ಯ, ಜಿ. ಸೋಮಶೇಖರ್‌ ರೆಡ್ಡಿ ಸೇರಿದಂತೆ ಪಾಲಿಕೆಯ ಮೇಯರ್‌, ಸದಸ್ಯರು, ಅನೇಕ ಜನಪ್ರತಿನಿಧಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. --

ಟ್ರಾಫಿಕ್ ಜಾಮ್ಸಿಡಿಬಂಡಿ ರಥೋತ್ಸವ ಹಿನ್ನೆಲೆ ರಸ್ತೆ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿತ್ತು. ಹೀಗಾಗಿ ನಗರದಲ್ಲಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಶುರುವಾಯಿತು. ದುರ್ಗಮ್ಮ ದೇವಸ್ಥಾನ ಮಾರ್ಗವಾಗಿ ತೆರಳುವ ವಾಲ್ಮೀಕಿ ವೃತ್ತ (ಎಸ್ಪಿ ಸರ್ಕಲ್), ಗಡಗಿಚನ್ನಪ್ಪ ವೃತ್ತ, ಕೂಲ್ ಕಾರ್ನರ್ ವೃತ್ತ, ಕಪ್ಪಗಲ್ ರಸ್ತೆ ಹಾಗೂ ಮೋಕಾ ರಸ್ತೆಯಿಂದ ದೇವಸ್ಥಾನಕ್ಕೆ ಬರುವ ವಾಹನಗಳಿಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಟ್ರಾಫಿಕ್ ಸಮಸ್ಯೆ ನೀಗಿಸಲು ಸಂಚಾರಿ ಪೊಲೀಸರು ಸೋಮವಾರ ರಾತ್ರಿಯಿಂದಲೇ ರಸ್ತೆಗಿಳಿದು ಬ್ಯಾರಿಕೇಡ್‌ಗಳನ್ನು ಅಳವಡಿಸಿದರು.ಶ್ರೀಕನಕ ದುರ್ಗದೇವಿಯ ಹಿನ್ನೆಲೆನಗರಕ್ಕೆ ಆರಾಧ್ಯ ದೈವ ಶ್ರೀಕೋಟೆ ಮಲ್ಲೇಶ್ವರನಾದರೆ, ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ಎಂದೇ ಭಕ್ತರು ನಂಬಿದ್ದಾರೆ. ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ.

ಬಳ್ಳಾರಿ ಜನರ ಉದ್ಧಾರಕ್ಕೆಂದೇ ಶ್ರೀಕನಕ ದುರ್ಗಾದೇವಿ ಹುತ್ತದಲ್ಲಿ ಉದ್ಭವಿಸಿ, ಭಕ್ತಿಯಿಂದ ಸ್ಮರಿಸುವ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡುವ ಶಕ್ತಿದೇವತೆ ಎಂದೇ ನಂಬಲಾಗುತ್ತದೆ. ಆಂಧ್ರಪ್ರದೇಶದ ವಿಜಯವಾಡ ಕನಕದುರ್ಗಮ್ಮ ದೇವಿಯೇ ಈ ಭಾಗದಲ್ಲಿ ಮತ್ತೆ ಉದ್ಭವಿಸಿದ್ದಾಳೆ ಎಂಬ ನಂಬಿಕೆಯೂ ಭಕ್ತರಲ್ಲಿ ಬಲವಾಗಿದೆ.ಸಾಮಾನ್ಯವಾಗಿ ಪೂರ್ವ ಅಥವಾ ಉತ್ತರಾಭಿಮುಖವಾಗಿ ದೇವಸ್ಥಾನದ ಪ್ರವೇಶದ್ವಾರ ಇರುವುದು ವಾಡಿಕೆ. ಆದರೆ, ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಪ್ರವೇಶದ್ವಾರವು ಪಶ್ಚಿಮಾಭಿಮುಖವಾಗಿದೆ. ಹುತ್ತಲ್ಲಿ ಉದ್ಭವಿಪ ಶ್ರೀಕನಕ ದುರ್ಗ ದೇವಿಯ ಬೆನ್ನಿಗೆ ಪೂಜೆ ಸಲ್ಲಿಕೆಯಾಗುತ್ತಿದ್ದು, ಇದು ದೇಶದಲ್ಲಿಯೇ ಎರಡನೇ ದೇವಸ್ಥಾನ ಎಂದೇ ಹೇಳಲಾಗುತ್ತಿದೆ.

Share this article