ಎಲ್ಲರೂ ಒಪ್ಪಿಕೊಳ್ಳುವ ಪರಿಪೂರ್ಣ ಅವತಾರ ಶ್ರೀಕೃಷ್ಣ: ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ

KannadaprabhaNewsNetwork |  
Published : Dec 29, 2025, 02:45 AM IST
28ಎಚ್‌ ಪಿಟಿ1- ಹೊಸಪೇಟೆಯಲ್ಲಿ ಭಾನುವಾರ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಶಿವ ಮತ್ತು ವಿಷ್ಣುವಿನ ಆರಾಧಕರು ಒಬ್ಬರನ್ನೊಬ್ಬರು ದೂಷಿಸದೆ, ಸೌಹಾರ್ದದಿಂದ ವರ್ತಿಸಬೇಕು

ಹೊಸಪೇಟೆ: ಮಹಾಭಾರತದ ಶ್ರೀಕೃಷ್ಣ ಸ್ವಾತಂತ್ರ್ಯಕ್ಕೆ ಸ್ಫೂರ್ತಿಯಾಗಿದ್ದಾರೆ. ಭಗವದ್ಗೀತೆಯ ಸಾರದಿಂದಲೇ ನಾವು ಸ್ವಾತಂತ್ರ್ಯಕ್ಕೆ ಹೋರಾಟಕ್ಕೆ ಅಣಿಯಾಗಿ; ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ್ದೇವೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷ್ಣಕವಿ ರಂಗೋಪಂತ ನಾಗರಾಜರಾಯ ವಿರಚಿತ ಎತ್ನಳ್ಳಿ ಮಲ್ಲಯ್ಯ ಸಂಪಾದಿಸಿರುವ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋಧನೆಯಾಗಿತ್ತು, ಇದುವೇ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿತ್ತು. ಸ್ವಾತಂತ್ರ್ಯನಂತರ ದೇಶದ ಜನರಿಗೆ ಶ್ರೀರಾಮ ಆದರ್ಶನಾದ ಎಂದರು.

ಶ್ರೀಕೃಷ್ಣ ಎಲ್ಲರೂ ಒಪ್ಪಿಕೊಳ್ಳುವ ಪರಿಪೂರ್ಣ ಅವತಾರ ಆಗಿದೆ. ಕೃಷ್ಣನ ಕುರಿತು ರುದ್ರಭಟ್ಟ, ಕುಮಾರವ್ಯಾಸ ಬರೆದ ಕರ್ಣಾಟ ಭಾರತ ಕಥಾಮಂಜರಿ, ತೆಲುಗಿನ ಪೋತನ ಕವಿ ಮಹಾಭಾರತ ಕೃತಿಗಳು ಕೂಡ ಶ್ರೀಕೃಷ್ಣನ ಕುರಿತೇ ಗುಣಗಾನ ಮಾಡಿವೆ. ಮಧ್ವರು ಕೂಡ ಮಹಾಭಾರತ ತಾತ್ಪರ್ಯ ನಿರ್ಣಯದ ಕುರಿತು ಹೇಳಿದ್ದಾರೆ ಎಂದರು.

ಶಿವ ಮತ್ತು ವಿಷ್ಣುವಿನ ಆರಾಧಕರು ಒಬ್ಬರನ್ನೊಬ್ಬರು ದೂಷಿಸದೆ, ಸೌಹಾರ್ದದಿಂದ ವರ್ತಿಸಬೇಕು ಎಂಬ ಸಂದೇವನ್ನು ನಾಗರಾಜರಾಯರು ಶ್ರೀಕೃಷ್ಣನ ಮೂಲಕ ಹೇಳಿಸಿದ ರೀತಿ ಅದ್ಭುತವಾದುದು. ಮಹಾಭಾರತದ ಕಥಾನಕವನ್ನು ಕೇವಲ 20 ಸಂಧಿಗಳಲ್ಲಿ ಅಡಕಗೊಳಿಸಿ, ಉಳಿದ 88 ಸಂಧಿಗಳಲ್ಲಿ ಭಾಗವತದ ಅಂಶಗಳನ್ನು ಭಾಮಿನಿ ಷಟ್ಟದಿಯಲ್ಲಿ ಕಟ್ಟಿಕೊಟ್ಟ ನಾಗರಾಜರಾಯರ ಪ್ರತಿಭೆ ಅದ್ಭುತ ಎಂದರು.

ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಮಾತನಾಡಿ, ಕುಮಾರವ್ಯಾಸರು ಬರೆದ ಕೃತಿ ಗದುಗಿನ ಭಾರತ ಎಂದು ಜನಮಾನಸದಲ್ಲಿ ಪ್ರಸಿದ್ಧಿಯಾಗಿದೆ. ಕೃಷ್ಣಕವಿ ರಂಗೋಪಂತ ನಾಗರಾಜರಾಯರು ಬರೆದಿರುವ ಕೃತಿ ವಿಜಯನಗರದ ಭಾರತ ಎಂದು ಪ್ರಸಿದ್ಧಿ ಪಡೆಯಲಿ ಎಂದರು.

ಪಿವಿಎಸ್‌ಬಿಸಿ ಪ್ರೌಢಶಾಲೆ ಆಡಳಿತ ಮಂಡಳಿ ಸದಸ್ಯ ಪಿ.ಎನ್‌. ಶ್ರೀಪಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕೃಷ್ಣಕವಿ ರಂಗೋಪಂತ ನಾಗರಾಜರಾಯರು ಮಾತನಾಡಿದರು.

ಬೆಂಗಳೂರಿನ ವಕೀಲ ಮಾಣಿಕ್ಯ ಪ್ರಭು, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮೃತ್ಯುಂಜಯ ರುಮಾಲೆ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ, ಡಿಡಿಪಿಯು ನಾಗರಾಜ ಹವಾಲ್ದಾರ್, ಕೊಪ್ಪಳ ಡಿಡಿಪಿಐ ಎಲ್‌.ಡಿ.ಜೋಶಿ, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ, ವಿಜಯನಗರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುರಚನ್ನ ಶಾಸ್ತ್ರಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ವೆಂಕಟೇಶ್, ಉದ್ಯಮಿ ಪತ್ತಿಕೊಂಡ ಸಂತೋಷ್‌ನಾಗ್, ಎತ್ನಳ್ಳಿ ಮಲ್ಲಯ್ಯ ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ವಡಕರಾಯ ದೇವಸ್ಥಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಮಹಾಕಾವ್ಯದ ಮಹಾಯಾನ ರೂಪದಲ್ಲಿ ಗ್ರಂಥಕರ್ತರ ಮೆರವಣಿಗೆ ನಡೆಯಿತು. ಅಂಜಲಿ ಭರತನಾಟ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು.

ಪಲ್ಲವಿ ಆರ್. ಭಟ್, ಎನ್‌.ನಾಗರಾಜ, ಜಿ.ಯರಿಸ್ವಾಮಿ, ವೀರಮ್ಮ ಹಿರೇಮಠ, ಹನುಮೇಶ ಪಾಟೀಲ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!
ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।