ಧಾರವಾಡ: ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಕೃಷ್ಣ ಜನ್ಮಾಷ್ಟಮಿ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ. ನಮಗೆ ಕೃಷ್ಣ ಎಲ್ಲ ರೀತಿಯಲ್ಲೂ ಎಲ್ಲ ಕಾಲದಲ್ಲೂ ಮಾರ್ಗದರ್ಶನ ಮಾಡುವ ಶ್ರೇಷ್ಠ ಮಾರ್ಗದರ್ಶಕ. ನಾವಿಂದು ಕೃಷ್ಣ ಜನ್ಮಾಷ್ಟಮಿಯನ್ನು ಬೇಂದ್ರೆಯವರ ಕರ್ಮಭೂಮಿಯಲ್ಲಿ ಆಚರಿಸುತ್ತಿರುವುದು ಔಚಿತ್ಯಪೂರ್ಣ ಎಂದು ನಿರ್ದೇಶಕ ಡಾ. ಶಶಿಧರ ನರೇಂದ್ರ ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿನಾಯಕ ಭಟ್ ಶೇಡಿಮನೆ, ಕೃಷ್ಣ ಹದಿನಾರು ಸಾವಿರ ಮದುವೆಗಳಾಗಿದ್ದ ಎಂಬ ತಪ್ಪು ಕಲ್ಪನೆಯಲ್ಲಿ ನೋಡುವ ಪರಿಕಲ್ಪನೆ ಇತ್ತೀಚಿನ ದಿನಗಳಲ್ಲಿ ಬಂದಿದೆ. ಭಗವತ್ ಗೀತೆಯ ಮೂಲಕ ಆಯಾ ವೃತಿಗೆ ಪೂರಕವಾಗುವಂತೆ ಕರ್ಮಣ್ಯೇ ವಾದಿಕಾರಸ್ತೇ ಎಂದು ಕರ್ತವ್ಯವೇ ಮುಖ್ಯವಾಗುತ್ತದೆ ಅನ್ನುವುದನ್ನು ಯಾವ ರೀತಿ ಹೇಳಿದ್ದಾನೆ ಎಂಬದಕ್ಕೆ ಕೃಷ್ಣ ಅದ್ಬುತ ಉದಾಹರಣೆ ಎಂದರು.
ಸಂಸ್ಕಾರ ಭಾರತಿ ಸಂಘಟನಾ ಪ್ರಮುಖ ಶ್ರೀನಿವಾಸ ಘೋಷ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಯೋಲಿನ್ ವಾದಕ ಪಂ. ವಾದಿರಾಜ ನಿಂಬರಗಿ, ವಸ್ತ್ರ ವಿನ್ಯಾಸಕಿ ಮುಕ್ತಾ ವೆರ್ಣೇಕರ ಅತಿಥಿಗಳಾಗಿದ್ದರು. ನೃತ್ಯ ಗುರು ವಿದ್ವಾನ್ ರಾಜೇಂದ್ರ ಟೊಣಪಿ, ಸಂಯೋಜಕ ಪ್ರಕಾಶ ಬಾಳಿಕಾಯಿ ವೇದಿಕೆಯಲ್ಲಿದ್ದರು.ರವಿ ಕುಲಕರ್ಣಿ ನಿರೂಪಿಸಿದರು. ಡಾ. ಗುರುಬಸವ ಮಹಾಮನೆ ವಂದಿಸಿದರು.
ನಂತರ ಭರತ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ಗಣೇಶ ಸ್ತುತಿ, ಶಿವಾಷ್ಟಕಂ, ತುಳಸಿದಳ, ಕೃಷ್ಣ ಕೃಷ್ಣ, ಮಳೆ, ಪಂಡರಪುರ ವಿಠ್ಠಲ ಸ್ತುತಿ, ಮುಗಿಲ ಮಾರಿಗೆ, ಬೂಚಿ ಬೂಚಿ ಬಂದಿದೆ, ಗಣೇಶ ಕೌತುವಂ, ಅರ್ಧನಾರೇಶ್ವರ, ಶ್ರೀ ಕೃಷ್ಣ ಶರಣಂ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು.