ಬಸವಾಪಟ್ಟಣ: ಶ್ರೀ ಲಕ್ಷ್ಮೀ ಕಾಂತೇಶ್ವರಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.ಬಸವಾಪಟ್ಟಣದಲ್ಲಿ ಜರುಗಿದ ಲಕ್ಷ್ಮೀ ಕಾಂತೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಪೂಜಾ ವಿಶೇಷಾದಿಗಳು ಜರುಗಿದ ನಂತರ ಶ್ರೀದೇವಿ ಮತ್ತು ಭೂದೇವಿ ಸಮೇತ ಲಕ್ಷ್ಮಿಕಾಂತೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ಭಕ್ತರು ರಥವೆಳೆದರು. ದೇವಾಲಯದಿಂದ ಹೊರಟ ರಥವು ಗಣಪತಿ ದೇವಾಲಯದವೆರೆಗೆ ತೆರಳಿ ಸ್ವಸ್ಥಾನ ಸೇರಿತು. ರಥದ ಹಿಂದೆ ವಿಪ್ರ ಸಮುದಾಯದ ಭಜನೆಗಳನ್ನು ಹಾಡುತ್ತಾ ಸಾಗಿದ್ದು ಭಕ್ತರ ಗಮನಸೆಳೆಯಿತು. ವಿವಿಧ ಸಮುದಾಯಗಳ ವತಿಯಿಂದ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಬಸವಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಉಪಾಧ್ಯಕ್ಷ ಬಿ.ಜೆ.ಕುಮಾರ, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಗ್ರಾಮದ ಪ್ರಮುಖರು, ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರಿದ್ದರು.