ಕೋಡಿಮಠದಲ್ಲಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭ

KannadaprabhaNewsNetwork |  
Published : Mar 06, 2026, 02:15 AM IST
ಮಠದ ಸಂಪ್ರದಾಯದಂತೆ ಸಾವಿರಾರು ಮುತ್ತೈದೆಯರಿಗೆ ಉಡಿತುಂಬಿ, ಮಡಿಲಕ್ಕಿ, ಕುಂಕುಮ ಹಾಗೂ ಬಾಗಿನ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಮಠದ ಸಂಪ್ರದಾಯದಂತೆ ಸಾವಿರಾರು ಮುತ್ತೈದೆಯರಿಗೆ ಉಡಿತುಂಬಿ, ಮಡಿಲಕ್ಕಿ, ಕುಂಕುಮ ಹಾಗೂ ಬಾಗಿನ ನೀಡಿ ಗೌರವಿಸಲಾಯಿತು. ಜಾತಿ, ಮತ, ಪಂಥ ಭೇದವಿಲ್ಲದೆ ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು. ಮಠಾಧೀಶರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅರಿಶಿನ, ಕುಂಕುಮ, ಹೂ, ಬಳೆ ಹಾಗೂ ಸೀರೆಗಳನ್ನು ಮಹಿಳೆಯರಿಗೆ ನೀಡಿ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾರನಹಳ್ಳಿ ಕೋಡಿಮಠದಲ್ಲಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ಆರಂಭವಾಯಿತು. ಜಾತ್ರೆಯ ಅಂಗವಾಗಿ ಮೊದಲ ದಿನವೇ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಜಾತ್ರಾ ಮಹೋತ್ಸವದ ಮೊದಲ ದಿನ ಬುಧವಾರ, ಮಠದ ಸಂಪ್ರದಾಯದಂತೆ ಸಾವಿರಾರು ಮುತ್ತೈದೆಯರಿಗೆ ಉಡಿತುಂಬಿ, ಮಡಿಲಕ್ಕಿ, ಕುಂಕುಮ ಹಾಗೂ ಬಾಗಿನ ನೀಡಿ ಗೌರವಿಸಲಾಯಿತು. ಜಾತಿ, ಮತ, ಪಂಥ ಭೇದವಿಲ್ಲದೆ ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

ಮಠಾಧೀಶರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅರಿಶಿನ, ಕುಂಕುಮ, ಹೂ, ಬಳೆ ಹಾಗೂ ಸೀರೆಗಳನ್ನು ಮಹಿಳೆಯರಿಗೆ ನೀಡಿ ಆಶೀರ್ವದಿಸಿದರು. ಈ ವೇಳೆ ಮಾತನಾಡಿದ ಅವರು, ಮಠಕ್ಕೆ ಬರುವ ಪ್ರತಿಯೊಬ್ಬ ಹೆಣ್ಣು ಮಗಳು ಪಾರ್ವತಿ ಸಮಾನಳು ಎಂಬ ನಂಬಿಕೆ ನಮ್ಮದು. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಪ್ರದಾಯದ ಅವಿಭಾಜ್ಯ ಅಂಗ ಎಂದು ತಿಳಿಸಿದರು.

ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ನಾಡಿನ ಲಕ್ಷಾಂತರ ಭಕ್ತರಿಗೆ ಕೋಡಿಮಠ ಸನ್ಮಾರ್ಗ ತೋರಿಸುವ ಕೇಂದ್ರವಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಠದ ಸೇವೆ ಶ್ಲಾಘನೀಯ ಎಂದು ಹೇಳಿದರು. ಮುಂದಿನ ವರ್ಷದಿಂದ ಮುತ್ತೈದೆಯರಿಗೆ ಉಡಿತುಂಬುವ ಸೇವಾ ಕಾರ್ಯಕ್ಕೆ ತಮ್ಮ ವತಿಯಿಂದ ಒಂದು ಸಾವಿರ ಸೀರೆಗಳನ್ನು ನೀಡುವುದಾಗಿ ಘೋಷಿಸಿದರು.

ಗುರುವಾರ ಮಹಾಸ್ವಾಮೀಜಿಗಳು ಕೋಡಿಮಠ ಹಾಗೂ ಹಾರನಹಳ್ಳಿ ಗ್ರಾಮಗಳಿಗೆ ಪಾದಯಾತ್ರೆಯ ಮೂಲಕ ಭೇಟಿ ನೀಡಿ ಮನೆಮನೆಗೆ ತೆರಳಿ ಭಿಕ್ಷಾಟನೆ ನಡೆಸಲಿದ್ದಾರೆ. ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು- ತೋರಣಗಳಿಂದ ಅಲಂಕಾರ ಮಾಡಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಜಾತ್ರಾ ಕಾರ್ಯಕ್ರಮದಲ್ಲಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತ ಜೀವನದ ಅವಿಭಾಜ್ಯ ಅಂಗ : ರಂಭಾಪುರಿ ಶ್ರೀ
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಡಾ.ನಾಗಲಕ್ಷ್ಮಿ ಚೌಧರಿ