- ಕೆಂಪುಗೊಂದಿ ಹಾವಳಿ ಹೆಚ್ಚಾದೀತಲೇ... ಎಚ್ಚರ.. ಎಚ್ಚರ... ಎಚ್ಚರ...! ।
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಮ ರಾಮ ಅಂದು ನುಡಿದಿತ್ತಲೇ...ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ
ಕೆಂಪುಗೊಂದಿ ಹಾವಳಿ ಹೆಚ್ಚಾದಿತಲೇ
ಮಧ್ಯ ಕರ್ನಾಟಕದ ಐತಿಹಾಸಿದ ಕ್ಷೇತ್ರವಾದ ದಾವಣಗೆರೆಯ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವು ನಗರದ ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಡೇ ಶ್ರಾವಣ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಅದರಂತೆ ಈ ಸಲದ ಕಾರ್ಣಿಕ, ರಾಮ ರಾಮ ಅಂದು ನುಡಿದಿತ್ತಲೇ ಎನ್ನುವ ಮೂಲಕ ದೇವರ ಸ್ಮರಣೆ, ಧರ್ಮ ಮತ್ತು ಸತ್ಯದ ಮಾರ್ಗವನ್ನು ಜನರೆಂದಿಗೂ ಮರೆಯಬಾರದೆಂಬ ಸಂದೇಶವನ್ನು ಕಾರ್ಣೀಕರ ಮೂಲಕ ನೀಡಲಾಗಿದೆ. ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ ಅಂದರೆ ಶೃಂಗಾರ, ಸೌಂದರ್ಯ ಮತ್ತು ಸಮೃದ್ಧಿಯ ಸಂಕೇತವಾದ ಸ್ಥಳದಲ್ಲಿ ಮುತ್ತೈದೆಯರು ಸೇರಿಕೊಂಡು, ಶುಭ ಕಾರ್ಯವನ್ನು ನೆರವೇರಿಸುವ, ಕುಟುಂಬಗಳಲ್ಲಿ ಶಾಂತಿ, ಸಮಾಧಾನ, ಸಮೃದ್ಧಿ, ನೆಮ್ಮದಿ ನೆಲೆಸುವಂತಹ ಸುಳಿವು ನೀಡುವುದಾಗಿದೆ.
ಕೆಂಪಗೊಂದಿ ಹಾವಳಿ ಹೆಚ್ಚಾದೀತಲೆಯೆಂಬುದು ಕೆಂಪು ಹಾಗೂ ಹಾವಳಿ ಎಂಬ ಪದಗಳು ಜಗತ್ತಿನಲ್ಲಿ ಕೆಲವರು ಸಂಘರ್ಷ, ಅಶಾಂತಿ, ಅಪಾಯ, ತೀವ್ರ ಬದಲಾವಣೆಯ ಸಂಕೇತವಾಗಿ ಅರ್ಥೈಸಬಹುದು. ನಿರ್ದಿಷ್ಟ ಘಟನೆ ಅಥವಾ ಅನಾಹುತದ ಮುನ್ಸೂಚನೆ ಇದೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ಕೆಂಪು ಬಣ್ಣ, ಗೊಂದಿಯೆಂದರೆ ಕೀಟಗಳೆನ್ನಬಹುದು. ಹಾಗೆ ನೋಡಿದರೆ ಭಾರತದ ಮಟ್ಟಿಗೆ ಕೆಂಪು ಅಂದರೆ ಚೀನಾ, ಗೊಂದಿಯೆಂದರೆ ಚೀನಿಗರೆಂದು ಅರ್ಥೈಸಬಹುದು. ಕೆಂಪುಗೊಂದಿ ಹಾವಳಿ ಹೆಚ್ಚಾದೀತಲೆ ಎಂಬುದು ನೆರೆಯ ಚೀನಾದಿಂದ ಭಾರತಕ್ಕೆ ಅಪಾಯದ ಸುಳಿವು ಎಂದರೂ ತಪ್ಪಲ್ಲ ಎನ್ನುವುದು ಹಿರಿಯರ ಅರ್ಥೈಸುವಿಕೆಯಾಗಿದೆ.
ಶ್ರಾವಣದ ಕಡೇ ಸೋಮವಾರದಂದು ಆನೆಕೊಂಡ ಮರಡಿ ಶ್ರೀ ಬಸವೇಶ್ವರ ಸ್ವಾಮಿ ಜಾತ್ರೆ, ಕಾರ್ಣೀಕದ ವೇಳೆ ಹಳೆ ಬಾತಿ, ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿಗಳು, ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ, ವೆಂಕಾ ಭೋವಿ ಕಾಲನಿ ಮತ್ತು ಶ್ರೀ ಕನಕ ದುರ್ಗಾದೇವಿ, ಕೊರಮರ ಕಾಲನಿಯ ಶ್ರೀ ವೆಂಕಟೇಶ್ವರ ದೇವರು, ಕೊರಚರಹಟ್ಟಿಯ ಶ್ರೀ ಬಸವಾಪಟ್ಟಣ ದುರುಗಮ್ಮ, ಎಸ್ಸೆಂ ಕೃಷ್ಣ ನಗರದ ಶ್ರೀ ಗಾಳಿ ದುರ್ಗಮ್ಮ, ಕುರುಬರಕೇರಿ ಶ್ರೀ ಅರಿಕೇರಮ್ಮ ದೇವಿ, ಗಾಂಧಿ ನಗರದ ಶ್ರೀ ಮಲ್ಲಾಡಿ ಚೌಡೇಶ್ವರಿ ದೇವಿ, ಎಸ್ಪಿಎಸ್ ನಗರದ ಶ್ರೀ ಶ್ರೀ ಕುಕ್ಕವಾಡೇಶ್ವರಿ ದೇವಿ, ಎಸ್ಪಿಎಸ್ ನಗರದ ಶ್ರೀ ಹುಲಿಗೆಮ್ಮ ದೇವಿ, ಎಸ್ಸೆಸ್ ಬಡಾವಣೆ ಶ್ರೀ ಭೂತಪ್ಪ ದೇವರು, ಎಲೆಬೇತೂರು ಶ್ರೀ ದೇವಿ ದುರುಗಮ್ಮ, ಮುದ್ದಾ ಬೋವಿ ಕಾಲನಿ ಶ್ರೀ ವೆಂಕಟೇಶ್ವರ ದೇವರು, ಬಸಾಪುರದ ಶ್ರೀ ಗೋಚಂದ್ರ ಮಾರಮ್ಮ, ಮುದ್ದಾಭೋವಿ ಕಾಲನಿ ಶ್ರೀ ನೀರು ಮನೆ ಯಲ್ಲಮ್ಮ ದೇವರು ಸೇರಿದಂತೆ ಸಮಸ್ತ ದೇವರ ಸಮಕ್ಷಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ನೆರವೇರಿತು. ಸಹಸ್ರಾರು ಭಕ್ತರು ತದೇಕ ಚಿತ್ತದಿಂದ ಕಾರ್ಣೀಕ ನುಡಿಗಳಾಗುತ್ತಲೇ ಹರ್ಷೋದ್ಘಾರದಿಂದ ಘೋಷಣೆ ಕೂಗಿದರು.
-7ಕೆಡಿವಿಜಿ9, 10, 11: ದಾವಣಗೆರೆಯ ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ಸ್ವಾಮಿಯ ಶ್ರಾವಣ ಕಡೇ ಸೋಮವಾರದ ಕಾರ್ಣೀಕ ಆಲಿಸಲು ಸೇರಿದ್ದ ಸಹಸ್ರಾರು ಭಕ್ತರ ಸಮಕ್ಷದಲ್ಲಿ ಸಾಗುತ್ತಿರುವ ದೇವರ ಪಲ್ಲಕ್ಕಿಗಳು.