ರಕ್ತದಾನ ಮತ್ತೊಬ್ಬರ ಜೀವ ಉಳಿಸುವ ಮಹತ್ಕಾರ್ಯವಾಗಿದ್ದು, ಆರೋಗ್ಯವಂತ ಯುವಕ - ಯುವತಿಯರು ನಿಯಮಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸದ್ಗುರು ಬಸವಪ್ರಭು ಮಹಾ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ರಕ್ತದಾನ ಮತ್ತೊಬ್ಬರ ಜೀವ ಉಳಿಸುವ ಮಹತ್ಕಾರ್ಯವಾಗಿದ್ದು, ಆರೋಗ್ಯವಂತ ಯುವಕ - ಯುವತಿಯರು ನಿಯಮಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸದ್ಗುರು ಬಸವಪ್ರಭು ಮಹಾ ಸ್ವಾಮೀಜಿ ಹೇಳಿದರು.

ಕೋಳಾರ(ಕೆ) ಗ್ರಾಮದ ಬಸವ ಮಂಟಪದಲ್ಲಿ ಬಸವಸಿರಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್, ರಾಷ್ಟ್ರೀಯ ಬಸವ ದಳ, ಕೋಳಾರ(ಕೆ) ಹಾಗೂ ಬೀದರ್‌ನ ಬ್ರಿಮ್ಸ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ನೇತೃತ್ವ ವಹಿಸಿ ಮಾತನಾಡಿ, ರಕ್ತ ನರನಾಡಿಗಳಲ್ಲಿ ಹರಿಯಬೇಕೇ ವಿನಃ ನಾಲಿಗಳಲ್ಲಿ ಹರಿಯಬಾರದು ಎಂದರು.

ಶಿಬಿರದಲ್ಲಿ ಸದ್ಗುರು ಬಸವಪ್ರಭು ಮಹಾಸ್ವಾಮೀಜಿ ಅವರು 13ನೇ ಬಾರಿ ರಕ್ತದಾನ ಮಾಡುವ ಮೂಲಕ ಯುವ ಜನತೆಗೆ ಮಾದರಿಯಾದರು. ರಕ್ತದಾನದಿಂದ ಸಂಕಷ್ಟದಲ್ಲಿರುವ ರೋಗಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.

ಜಿ.ಪಂ. ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ ಗುರುಬಸವ ಪೂಜೆಯೊಂದಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬ್ರಿಮ್ಸ್ ನಿರ್ದೇಶಕಿ ಡಾ.ಶಾಂತಲಾ ಕೌಜಲಗಿ ಮಾತನಾಡಿ, ಹಿಂದಿನ ದಿನಗಳಿಗಿಂತ ಪ್ರಸ್ತುತ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಅರ್ಥಪೂರ್ಣ ಸೇವಾ ಕಾರ್ಯ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಡಾ.ವಿಜಯಕುಮಾರ್ ಕೋಟೆ, ಗ್ರಾಮದ ಹಿರಿಯ ಮಲ್ಲಿಕಾರ್ಜುನ ಶಂಭು ಮಾತನಾಡಿದರು. ಬಸವಸಿರಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶೈಲಜಾ ಜಿ. ಹುಡಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಶಂಭು, ಅಖಿಲ ಭಾರತ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸಂಘ ಟನಾ ಕಾರ್ಯದರ್ಶಿ ಸತೀಶ ಕುಲಕರ್ಣಿ, ಅಕ್ಕಮಹಾದೇವಿ ಮಹಿಳಾ ಘಟಕದ ಪರವಾಗಿ ಭಕ್ತಿಶ್ರೀ ತುಪ್ಪದ, ರವಿ ಶಂಭು, ಡಾ.ಬಸವದರ್ಶನ ಹುಡಗೆ, ಗುಂಡಪ್ಪ ಹುಡಗೆ, ರವಿ ಪಾಪಡೆ, ರಾಜಕುಮಾರ್ ಚಿಲ್ಲರ್ಗೆ, ವಿಶ್ವನಾಥ ಪಾಪಡೆ, ರಾಮಶೆಟ್ಟಿ ಸಿದ್ದೇಶ್ವರ, ಅರುಣಕುಮಾರ್ ಬಿರಾದಾರ, ಅರವಿಂದ ಧುಮ್ಮನಸೂರೆ ಉಪಸ್ಥಿತರಿದ್ದರು.