ಹೊಸಪೇಟೆ: ಪರಂಪರಾಗತವಾಗಿ ಮಂತ್ರಾಲಯ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀಮೂಲರಾಮದೇವರನ್ನು ಮರಳಿ ಶ್ರೀಮಠಕ್ಕೆ ತಂದುಕೊಟ್ಟವರು ಶ್ರೀರಘುನಂದನ ತೀರ್ಥರು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಹಂಪಿಯಲ್ಲಿ ಶ್ರೀರಘುನಂದನ ತೀರ್ಥರ ಗುರುಗಳಾದ ಶ್ರೀಸೂರೇಂದ್ರ ತೀರ್ಥರ ಬೃಂದಾವನ, ಮಠವೂ ಕಳೆದ ಕೆಲ ವರ್ಷಗಳ ಹಿಂದೆ ಉತ್ಖನನ ಸಂದರ್ಭದಲ್ಲಿ ಪತ್ತೆಯಾಗಿದೆ. ಇಲ್ಲಿಯ ನೀತಿ, ನಿಯಮಗಳಂತೆ ಮುಂದಿನ ದಿನಗಳಲ್ಲಿ ಜೀರ್ಣೋದ್ಧಾರ ಪೂಜಾ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಶ್ರೀರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಮೂಲ ಬೃಂದಾವನಕ್ಕೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ರಜತ, ರೇಷ್ಮೆ ಹಾಗೂ ವಸ್ತ್ರಾಲಂಕಾರ ನೆರವೇರಿಸಲಾಯಿತು. ಬಳಿಕ ವಿವಿಧ ಹೂವುಗಳಿಂದ ಮೂಲ ಬೃಂದಾವನಕ್ಕೆ ಅಲಂಕಾರ ಮಾಡಲಾಯಿತು.ಶ್ರೀಗಳು ಶ್ರೀಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ ನೆರೆದಿದ್ದ ಭಕ್ತರಿಗೆ ದರ್ಶನ ಮಾಡಿಸಿದರು. ಬಳಿಕ ನೈವೇದ್ಯ, ಹಸ್ತೋದಕ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಿದರು. ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ಶತಕಂಠ ಗಾನ ಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀಮಠದ ಪಂಡಿತರಾದ ವೇಣುಗೋಪಾಲ ಆಚಾರ್ಯ, ಕನಕಾಚಲಾಚಾರ್ಯ, ಶ್ರೀಮಠದ ಅನಂತ ಪುರಾಣಿಕ್, ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಠಾಧಿಕಾರಿ ಪವನಾಚಾರ್ಯ, ವ್ಯವಸ್ಥಾಪಕರಾದ ಸುಮಂತ್ ಕುಲಕರ್ಣಿ, ಟೀಕಾಚಾರ್ಯ, ಕೃಷ್ಣಮೂರ್ತಿ, ಪ್ರಮುಖರಾದ ಭೀಮಸೇನಾಚಾರ್ಯ, ಶಿರೆಕೊಳ್ಳ ಗುರುರಾಜ್, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.