ಕನ್ನಡಪ್ರಭ ವಾರ್ತೆ ವಿಜಯಪುರ
ಮಾದಕ ವಸ್ತುಗಳ ಸಹವಾಸ ವ್ಯಕ್ತಿಯನ್ನು ವಿನಾಶದೆಡೆಗೆ ಕೊಂಡೊಯ್ಯುತ್ತದೆ. ಅವುಗಳಿಂದ ದೂರವಿರುವ ದೃಢವಾದ ನಿರ್ಧಾರ ಮಾತ್ರ ನಿಮ್ಮನ್ನು ಭದ್ರ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಭಗವಾನ್ ಬಿ.ಸಿ. ತಿಳಿಸಿದರು.ಶುಕ್ರವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಜಿಲ್ಲಾ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಶುಕ್ರವಾರ ನಡೆದ ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ ಯುವ ಶುದ್ಧಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನದಲ್ಲಿ ಅವರು ಮಾತನಾಡಿದರು.
ರಾಜ್ಯದ ನಮ್ಮ ಎಲ್ಲಾ ಕಾಲೇಜುಗಳ ಆವರಣಗಳನ್ನು ಸಂಪೂರ್ಣ ನಶಾಮುಕ್ತ ಮಾಡುವ ನಮ್ಮ ಬದ್ಧತೆಯ ಭಾಗವಾಗಿ ಈಗಾಗಲೇ 10 ಜಿಲ್ಲೆಗಳಲ್ಲಿ ನಶಾಮುಕ್ತ ಕ್ಯಾಂಪಸ್ ಅಭಿಯಾನ ನಡೆಸಿದ್ದೇವೆ. ಪಂಚ ನದಿಗಳ ನಾಡು ವಿಜಯಪುರ ತನ್ನದೆಯಾದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದೆ. ಈ ನೆಲದಲ್ಲಿ ನಮ್ಮ 11ನೇ ಕಾರ್ಯಕ್ರಮ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ ಕಟ್ಟಬೇಕಾದರೆ ಮೊದಲು ಶಾಲಾ-ಕಾಲೇಜುಗಳನ್ನು ನಶಾಮುಕ್ತಗೊಳಿಸಬೇಕು. ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಯೋಜನೆ ನಮ್ಮ ಮುಂದಿದೆ. ಏಕೆಂದರೆ ಆರೋಗ್ಯಕರ ಜೀವನದ ಅರಿವು ಆರಂಭದಲ್ಲಿಯೇ ಮೂಡಿದರೆ ಭವಿಷ್ಯದ ಬೇರು ಮತ್ತಷ್ಟು ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು, ವಿದ್ಯಾರ್ಥಿಗಳು, ಆಯಾ ಜಿಲ್ಲಾ ಸಚಿವರು, ಶಾಸಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಅಭೂತಪೂರ್ವ ಸಾಥ್ ನೀಡಿದ್ದಾರೆ ಎಂದು ಹೇಳಿದರು.
ದುಶ್ಚಟಗಳಿಂದ ವಿನಾಶ:
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಶೆ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತದೆ. ಮಾದಕ ವಸ್ತುಗಳು ಯುವಶಕ್ತಿಯ ಚೈತನ್ಯವನ್ನು ಕಸಿಯುತ್ತವೆ. ಇಂತಹ ದುಶ್ಚಟಗಳಿಂದ ಯುವಜನರನ್ನು ಉಳಿಸಲು ಚಳವಳಿ ರೂಪದ ಪ್ರಯತ್ನಗಳು ನಡೆಯಬೇಕಿದೆ. ಯುವಜನರಲ್ಲಿ ದುಶ್ಚಟಗಳ ಅಡ್ಡಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕೆಲಸ ನಡೆಯಬೇಕಿದೆ. ಇಂತಹ ಪ್ರಯತ್ನ ಶ್ಲಾಘನೀಯ ಮತ್ತು ಅಭಿನಂದನೀಯ ಎಂದರು.
ವಿಜಯಪುರದಲ್ಲಿ ಡ್ರಗ್ಸ್ ಹಾವಳಿ ಕಂಡುಬಂದಿಲ್ಲ. ಆದರೆ, ನಮ್ಮ ಯುವಕರು ತಂಬಾಕು ದಾಸರಾಗಿರುವುದು ನಿಚ್ಚಳವಾಗಿ ಕಾಣುತ್ತದೆ. ನಗರದ ರಸ್ತೆಗಳು, ಕಾಲೇಜು ಕಾರಿಡಾರ್‌ಗಳ ಮೆಟ್ಟಿಲುಗಳಲ್ಲಿ ತುಂಬಿ ಹೋಗಿರುವ ಕೆಂಪು ಓಕುಳಿಯನ್ನು ನೋಡಿದರೆ ತಂಬಾಕು ಹೇಗೆಲ್ಲಾ ಆಕ್ರಮಿಸಿಕೊಂಡಿದೆ ಎನ್ನುವುದು ತಿಳಿಯುತ್ತದೆ. ಇಂತಹ ಚಟಗಳಿಂದ ದೂರವಿದ್ದು ಯುವಜನತೆ ಆರೋಗ್ಯಕರ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಇದು ಕೇವಲ ಒಂದು ಅಭಿಯಾನವಲ್ಲ. ಯುವ ಸಮುದಾಯಕ್ಕೆ ಮಾದರಿ ಪಥವನ್ನು ತೋರಿಸುವ ಮಹಾನ್ ಕಾರ್ಯ ಎಂದರು.
ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು ಹವಾನಿಯಂತ್ರಿತ ಕೊಠಡಿಗಳಿಂದ ಆಚೆ ಬಂದು ಬಿಸಿಲು-ಮಳೆ ಲೆಕ್ಕಿಸದೇ ಇಂತಹ ಕಾರ್ಯಕ್ರಮ ರೂಪಿಸಬೇಕು. ನಶಾಮುಕ್ತ ಕರ್ನಾಟಕವನ್ನು ಕಟ್ಟಲು ಇಂತಹ ದಿಟ್ಟ ಹೆಜ್ಜೆಗಳು ಅಗತ್ಯ. ಈ ಕಾರಣಕ್ಕೆ ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಭಗವಾನ್ ಅವರ ಕಾರ್ಯ ಶ್ಲಾಘನೀಯ ಮತ್ತು ಅನುಕರಣೀಯ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಎಸ್. ಸಂಬಣ್ಣೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ ಭಾವನಾ ಆರ್, ದಿಶಾಬೋಧ್ ಫೌಂಡೇಶನ್ ನಿರ್ದೇಶಕ ಯೋಗಿ ದೇವರಾಜ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶ್ರೀ ಸಿದ್ದೇಶ್ವರ ಮಠದ ಆವರಣದಿಂದ ಆರಂಭವಾದ ವಾಕಥಾನ್ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದವರೆಗೆ ಸಾಗಿತು. ಬಿರುಬಿಸಿಲಿನಲ್ಲಿಯೂ ಸುಮಾರು 6 ಸಾವಿರ ವಿದ್ಯಾರ್ಥಿಗಳು, ಸಾವಿರಾರು ಸಂಖ್ಯೆಯ ಸಿಬ್ಬಂದಿ ಹಾಗೂ ನಾಗರಿಕರು ನಡಿಗೆಯಲ್ಲಿ ಪಾಲ್ಗೊಂಡಿದ್ದರು.--------
ಕೋಟ್....ಸುಮಾರು 300 ಕಾಲೇಜುಗಳ ಸುಮಾರು 55 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಜಾಥಾಗಳಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಎಲ್ಲಾ ಕಾಲೇಜುಗಳನ್ನು ಸಂಪೂರ್ಣ ನಶಾಮುಕ್ತ ಹಾಗೂ ಆರೋಗ್ಯಪೂರ್ಣ ಮಾಡುವತನಕ ನಮ್ಮ ಈ ನಡೆ ನಿಲ್ಲುವುದಿಲ್ಲ. ಎಲ್ಲಾ ಕಾಲೇಜು ಆವರಣಗಳನ್ನು ಶುದ್ಧವಾಗಿಡುವ ಸಂಕಲ್ಪ ಮಾಡೋಣ.
- ಡಾ.ಭಗವಾನ್ ಬಿ.ಸಿ., ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ