ರಾಮನಗರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋವುಗಳ ಅಕ್ರಮ ಸಾಗಾಟ, ಅನಧಿಕೃತ ಕಸಾಯಿಖಾನೆಗಳು, ಕಾನೂನುಬಾಹಿರ ಗೋಹತ್ಯೆ ತಡೆ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುರ್ತು ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳು, ಗಡಿಭಾಗಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ 24x7 ವಿಶೇಷ ತಪಾಸಣೆ ವ್ಯವಸ್ಥೆ ಜಾರಿಗೆ ತರಬೇಕು. ಗೋವುಗಳನ್ನು ಸಾಗಿಸುವ ವಾಹನಗಳ ದಾಖಲೆಗಳು, ಪರವಾನಗಿ ಹಾಗೂ ಪಶುವೈದ್ಯಕೀಯ ಪ್ರಮಾಣಪತ್ರಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು, ಅನಧಿಕೃತ ಕಸಾಯಿಖಾನೆಗಳು, ಅನುಮಾನಾಸ್ಪದ ಗೋದಾಮುಗಳು ಹಾಗೂ ಖಾಸಗಿ ಸ್ಥಳಗಳ ಮೇಲೆ ವಿಶೇಷ ದಾಳಿ ನಡೆಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ ಪೊಲೀಸ್ ಇಲಾಖೆ, ಪಶುಪಾಲನಾ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಜಂಟಿ ಕಾರ್ಯಪಡೆ ರಚಿಸಿ ನಿರಂತರ ನಿಗಾವಹಿಸಬೇಕು, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ತಕ್ಷಣ ಎಫ್ ಐಆರ್ ದಾಖಲಿಸಿ ವಾಹನ ವಶಪಡಿಕೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ರಾತ್ರಿ ಪಾಳಿಯಲ್ಲಿ ವಿಶೇಷ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ಕಾನೂನುಬಾಹಿರ ಪೋಸ್ಟ್‌ಗಳ ಮೇಲೆ ವಿಶೇಷ ನಿಗಾವಹಿಸಬೇಕೆಂದು ಒತ್ತಾಯಿಸಿದರು.ತಾಲೂಕು ಮಟ್ಟದಲ್ಲಿ ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಿ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸಹಾಯವಾಣಿ ಪ್ರಕಟಿಸಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ, 2023 ಅಡಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಕಾನೂನುಗಳ ಗೌರವ ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.
21ಕೆಆರ್ ಎಂಎನ್ 2.ಜೆಪಿಜಿ