ಹಿಂದೂಗಳ ರಕ್ಷಣೆಗಾಗಿ ಶ್ರೀರಾಮ ಸೇನೆ ಕಾರ್ಯಕರ್ತರ ಪಡೆ ರಚನೆ- ಮುತಾಲಿಕ್‌

KannadaprabhaNewsNetwork | Published : Apr 7, 2025 12:35 AM

ಸಾರಾಂಶ

ಹಿಂದೂಗಳಲ್ಲಿ ಧೈರ್ಯ ಬೆಳೆಯಬೇಕಾಗಿದೆ. ಸುಭಾಷಚಂದ್ರ ಬೋಸ್ ಅವರು ಅಜಾದ್ ಹಿಂದ್ ಫೌಜ್ ಸೈನ್ಯ ಕಟ್ಟಿದ ರೀತಿ ಶ್ರೀರಾಮ ಸೇನೆಯ ಕಾರ್ಯಕರ್ತರ ಪಡೆ ಸ್ಥಾಪಿಸುವ ಕಾರ್ಯ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಲಕ್ಷ್ಮೇಶ್ವರ:ಹಿಂದೂಗಳಲ್ಲಿ ಧೈರ್ಯ ಬೆಳೆಯಬೇಕಾಗಿದೆ. ಸುಭಾಷಚಂದ್ರ ಬೋಸ್ ಅವರು ಅಜಾದ್ ಹಿಂದ್ ಫೌಜ್ ಸೈನ್ಯ ಕಟ್ಟಿದ ರೀತಿ ಶ್ರೀರಾಮ ಸೇನೆಯ ಕಾರ್ಯಕರ್ತರ ಪಡೆ ಸ್ಥಾಪಿಸುವ ಕಾರ್ಯ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಾಲೆಯ ಆಟದ ಬಯಲಿನಲ್ಲಿ ಭಾನುವಾರ ಸಂಜೆ ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಗಣವೇಷಧಾರಿಗಳ ಪಥ ಸಂಚಲನ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಹಿಂದೂಗಳು ಸಂಘಟನೆಯೊಂದಿಗೆ ಸಮಾಜ ಬಾಂಧವರು ತನು, ಮನದಿಂದ ಕೈ ಜೋಡಿಸಿದರೆ ಹಿಂದೂ ರಾಷ್ಟ್ರ ಮಾಡಿ ತೋರಿಸುತ್ತೇವೆ. ದೇಶದಲ್ಲಿ ಹಿಂದೂಗಳು ಎರಡನೇ ದರ್ಜೆ ನಾಗರಿಕರಾಗಿದ್ದಾರೆ. ದೇಶದಲ್ಲಿ ಎರಡೆರಡು ಕಾನೂನು ಇರಬಾರದು. ಎಲ್ಲರಿಗೂ ಒಂದೇ ಕಾನೂನು ಅಗತ್ಯ ಇದೆ ಎಂದರು.

ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ಇರದ ವಕ್ಫ್ ಬೋಡ್೯ ಕಾಂಗ್ರೆಸ್ ಮುಸ್ಲಿಂರ ಮತಕ್ಕಾಗಿ ಹುಟ್ಟು ಹಾಕಿದ ಸಂಸ್ಥೆಯಾಗಿದೆ. ಮುಸ್ಲಿಂರಷ್ಟೆ ಅಲ್ಪಸಂಖ್ಯಾತರಲ್ಲ, ಸ್ವಾತಂತ್ರ್ಯ ಬಂದಾಗಿನಿಂದ ಮುಸ್ಲಿಂರ ತುಷ್ಟೀಕರಣ ನಡೆದಿದೆ. ಸಂವಿಧಾನದಲ್ಲಿ ಇಲ್ಲದ ಮುಸ್ಲಿಂ ತುಷ್ಟೀಕರಣ ನೀತಿಯಿಂದ ವಕ್ಫ್ ಬೋರ್ಡ್‌ ರಚನೆ ಮಾಡಿದ್ದು ಅಂಬೇಡ್ಕರ್‌ರಿಗೆ ಅವಮಾನ ಮಾಡಿದಂತಾಗಿದೆ. ನರೇಂದ್ರ ಮೋದಿಜಿ ಅವರು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿದ್ದು ಸ್ವಾಗತಾರ್ಹ. ಒಂಭತ್ತು ಲಕ್ಷ ಎಕರೆ ಆಸ್ತಿಯು ವಕ್ಫ್ ಬೋಡ್೯ ಹೆಸರಲ್ಲಿದೆ. ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿರುವುದು ಐತಿಹಾಸಿಕ ಸಾಧನೆಯಾಗಿದೆ.

ಗೋವು ಹಿಂದೂಗಳ ಆರಾಧ್ಯ ದೇವರು. ಅದನ್ನು ಕೊಂದರೆ ನಮಗೆ ಸಿಟ್ಟು ಬರುವುದಿಲ್ಲವೇ? ನಡೆದಾಡುವ ಔಷಧಾಲಯ ಗೋವು. ಗೋ ಹತ್ಯಾ ಕಾನೂನು ಜಾರಿಯಲ್ಲಿದೆ. ಆದರೂ ಕಾನೂನು ಜಾರಿಗೆ ತರುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಅದಕ್ಕಾಗಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತರುವಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಶ್ರೀರಾಮ ಸೇನೆಯ ಕಾರ್ಯಕರ್ತರು ವಾರದಲ್ಲಿ ಒಂದು ದಿನ ದೇಶಕ್ಕಾಗಿ ಮೀಸಲು ಇಡಲು ನಮ್ಮ ಪಡೆ ಸಿದ್ಧವಾಗಿದೆ.

ರಾಜ್ಯದಲ್ಲಿ ೧೨೦೦ ಗೋಶಾಲೆ ಶ್ರೀರಾಮ ಸೇನೆಯಿಂದ ನಡೆಯುತ್ತಿವೆ. ೨೦ ವರ್ಷದಲ್ಲಿ ೪೭೬೦ ಹುಡುಗಿಯರನ್ನು ಲವ್ ಜಿಹಾದ್‌ನಿಂದ ರಕ್ಷಿಸಲಾಗಿದೆ. ೨೭ ಸಾವಿರ ಆಕಳುಗಳನ್ನು ರಕ್ಷಿಸಲಾಗಿದೆ. ಹಿಂದೂ ಹುಡುಗಿಯರನ್ನು ಕೆಣಕುವುದನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂ ಆಗಿ ಹುಟ್ಟಲು ಪುಣ್ಯಮಾಡಿರಬೇಕು ಎಂದು ಹೇಳಿದ ಅವರು ಹಿಂದೂಗಳ ಕೆಣಕುವವರನ್ನು ಇನ್ನುಮುಂದೆ ಸುಮ್ಮನೆ ಬಿಡುವುದಿಲ್ಲ. ಶ್ರೀರಾಮ ಸೇನೆಯು ಏ.18ರಂದು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಖಂಡಿಸಿ, ಕಿತ್ತೂರ ಚೆನ್ನಮ್ಮಳ 200 ವರ್ಷದ ಜನ್ಮ ದಿನಾಚರಣೆ ಹಾಗೂ ರಾಣಿ ಅಬ್ಬಕ್ಕ ಅವರ 500ನೇ ವರ್ಷದ ಜನ್ಮ ದಿನದ ಅಂಗವಾಗಿ 1 ಸಾವಿರ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡುವುದಾಗಿ ಅವರು ಹೇಳಿದರು.

ಮುಂಬರುವ ಆಯುಧ ಪೂಜೆಯ ಹಬ್ಬದಲ್ಲಿ ತಲವಾರ, ಬರ್ಚಿ, ಕೊಡಲಿ ಚಾಕುಗಳನ್ನು ಇಟ್ಟು ಪೂಜೆ ಮಾಡುವ ಮೂಲಕ ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ಈರಣ್ಣ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ಮುತ್ತಣ್ಣ ಚೋಟಗಲ್ಲ, ರಾಮು ಪೂಜಾರ, ಬಸವರಾಜ ಚಕ್ರಸಾಲಿ ಸೇರಿದಂತೆ ಅನೇಕರು ಇದ್ದರು.

Share this article