ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ । ಸಾಂಸ್ಕೃತಿಕ ಕಾರ್‍ಯಕ್ರಮ । ಭಕ್ತರಿಗೆ ಕೋಸಂಬರಿ, ಪಾನಕ ಹಂಚಿಕೆ
ದಾವಣಗೆರೆಯಾದ್ಯಂತ ಎಲ್ಲೆಡೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರೀರಾಮ ನವಮಿಯನ್ನು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಇಲ್ಲಿನ ಪಿ.ಜೆ.ಬಡಾವಣೆಯ ರಾಮ ಮಂದಿರ, ಜಯದೇವ ವೃತ್ತದಲ್ಲಿರುವ ಶ್ರೀ ರಾಮ ದೇವಸ್ಥಾನ, ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನ, ಪಿ.ಬಿ.ರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನ ಸೇರಿದಂತೆ ಹಲವೆಡೆ ಭಾನುವಾರ ಮುಂಜಾನೆಯಿಂದ ಪೂಜೆ ಪುನಸ್ಕಾರಗಳು ನಡೆದವು. ದೇವರಿಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿತ್ತು.ಪುರಾತನ ಶ್ರೀರಾಮ ದೇವಸ್ಥಾನ:
ನಂತರ ಬಂದಂತ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಸಂಜೆ ಶುಭ ಮತ್ತು ಸಂಗಡಿಗರಿಂದ ವೀಣಾ ವಾದನ ಕಾರ್ಯಕ್ರಮ, ಭಾವಸಾರ ಕ್ಷತ್ರಿಯ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿಗೀತೆಗಳ ಕಾರ್ಯಕ್ರಮ, ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ್ ರಿಂದ ಸ್ಮಾರ್ಟ್ ಆರ್ಟ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ವಹಿವಾಟುದಾರರಾದ ರಾಜಾರಾಮ್ ಖಮಿತ್ಕರ್ ತಿಳಿಸಿದರು.
ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನ, ವಿನೋಬನಗರ, ಹಳೇಪೇಟೆಯ ಶಿವಾಜಿನಗರ, ನಿಟ್ಟುವಳ್ಳಿ, ಎಸ್.ನಿಜಲಿಂಗಪ್ಪ ಬಡಾವಣೆ, ಆಂಜನೇಯ ಬಡಾವಣೆ, ಎಸ್.ಎಸ್.ಆಸ್ಪತ್ರೆ ರಸ್ತೆ, ಜಯನಗರ, ಶಾಮನೂರು ವಿವಿಧೆಡೆ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ರಾಮ ಮೂರ್ತಿ, ಭಾವಚಿತ್ರ ಇಟ್ಟು ಪೂಜಿಸಿ, ಭಕ್ತಾದಿಗಳಿಗೆ ಕೋಸಂಬರಿ, ಪಾನಕ ವಿತರಿಸಿದರು.
ಇನ್ನು ಜಯದೇವ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಅನೇಕ ಸಂಘ ಸಂಸ್ಥೆಯವರು, ಭಕ್ತರು ಶ್ರೀ ರಾಮನವಮಿ ಅಂಗವಾಗಿ ಸಾರ್ವಜನಿಕರಿಗೆ ಪಾನಕ, ಕೋಸಂಬರಿ ವಿತರಿಸಿದರು.