ಮಂಗಳೂರು: ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ೨೦೨೫-೨೬ನೇ ಸಾಲಿನ ವಿತ್ತೀಯ ವರ್ಷದ ಅರ್ಧ ವಾರ್ಷಿಕ ಅವಧಿಯಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ. ದಿನಾಂಕ ೩೦.೦೯.೨೦೨೫ಕ್ಕೆ ೬೩೮ ಕೋಟಿ ರು. ಠೇವಣಿ, ೫೪೮ ಕೋಟಿ ರು. ಸಾಲ, ೧೧೮೬ ಕೋಟಿ ರು.(ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. ೨೦೨೪ನೇ ಸಪ್ಟೆಂಬರ್ ೩೦ಕ್ಕೆ ಹೋಲಿಸಿದರೆ ಠೇವಣಾತಿಯಲ್ಲಿ ೯೦ ಕೋಟಿ ರು., ಹೊರಬಾಕಿ ಸಾಲದಲ್ಲಿ ೬೬ ಕೋಟಿ ರು. ಹೆಚ್ಚಳದೊಂದಿಗೆ ಒಟ್ಟು ವ್ಯವಹಾರದಲ್ಲಿ ೧೫೬ ಕೋಟಿ ರು. ವೃದ್ಧಿಯನ್ನು ದಾಖಲಿಸಿದೆ. ೩೦.೦೯.೨೦೨೫ಕ್ಕೆ ನಿವ್ವಳ ಲಾಭ ೫.೭೬ ಕೋಟಿ ರು. ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ ೮೮ ಲಕ್ಷ ರು. ಹೆಚ್ಚಳವಾಗಿ ಶೇ.೧೮ ವೃದ್ಧಿಯಾಗಿರುತ್ತದೆ. ಸ್ಥಾಪನೆಯಾದಂದಿನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದ ಸೊಸೈಟಿ, ೨೦೨೪-೨೫ನೇ ಸಾಲಿಗೆ ಶೇ.೨೫ ಡಿವಿಡೆಂಡನ್ನು ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ ಶೇ.೨೫ ಡಿವಿಡೆಂಡನ್ನು ನೀಡುತ್ತಿದೆ. ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ ೧೮ ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ಮರುಪಾವತಿಯು ಉತ್ತಮವಾಗಿರುತ್ತದೆ. ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.