ಬನ್ನಿಮಂಟಪದಲ್ಲಿ 101 ಋತಿಜ್ವರಿಂದ ಶ್ರೀ ರಾಮತಾರಕ ಯಜ್ಞ

KannadaprabhaNewsNetwork |  
Published : Jan 10, 2026, 01:15 AM IST
5.ಶ್ರೀ ರಾಮತಾರಕ ಯಜ್ಞದ ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ರಾಮನಗರ: ದಕ್ಷಿಣ ಅಯೋಧ್ಯೆ ಎಂದೇ ಪ್ರಸಿದ್ಧಿ ಪಡೆದಿರುವ ರಾಮನೂರಿನಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಶ್ರೀ ರಾಮೋತ್ಸವಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ 101 ಪುರೋಹಿತರಿಂದ ಶ್ರೀ ರಾಮತಾರಕ ಯಜ್ಞ ನೆರವೇರಲಿದೆ.

ರಾಮನಗರ: ದಕ್ಷಿಣ ಅಯೋಧ್ಯೆ ಎಂದೇ ಪ್ರಸಿದ್ಧಿ ಪಡೆದಿರುವ ರಾಮನೂರಿನಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಶ್ರೀ ರಾಮೋತ್ಸವಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ 101 ಪುರೋಹಿತರಿಂದ ಶ್ರೀ ರಾಮತಾರಕ ಯಜ್ಞ ನೆರವೇರಲಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮನಗರದ ವಿವಿಧ ದೇವಾಲಯಗಳಲ್ಲಿ ಹೋಮ ಹವನ, ವಿಶೇಷ ಪೂಜಾ ಕಾರ್ಯಗಳು ನೆರವೇರಿದ್ದವು. ಇದೀಗ ದೊಡ್ಡ ಮಟ್ಟದಲ್ಲಿ ಶ್ರೀ ರಾಮತಾರಕ ಯಜ್ಞ ಆಯೋಜನೆಗೊಳ್ಳುತ್ತಿರುವುದು ರಾಮನಗರದ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದಾಗಿದೆ.

ರಾಮನಗರದ ರಾಮದೇವರ ಬೆಟ್ಟದಲ್ಲಿರುವ ಶ್ರೀ ಪಟ್ಟಾಭಿರಾಮನ ದೇಗುಲಕ್ಕೆ ಸಾಗುವ ಮಾರ್ಗದಲ್ಲಿರುವ ಶ್ರೀರಾಮನ ಭಂಟ ಅಭಯ ಆಂಜನೇಯನ ಬೃಹತ್ ಮೂರ್ತಿಯ ಸನಿಹದಲ್ಲಿಯೇ ಇರುವ ಬನ್ನಿಮಂಟಪದಲ್ಲಿ ಜನವರಿ 15ರಂದು ಶ್ರೀ ರಾಮತಾರಕ ಯಜ್ಞ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿದೆ.

ಲಕ್ಷಕ್ಕೂ ಅಧಿಕ ಶ್ರೀ ರಾಮತಾರಕ ಮಂತ್ರ ಪಠಣ:

ಶೃಂಗೇರಿ ಮಠದ ರಾಜು ಶ್ರೀನಾಥ ಶರ್ಮಾ ನೇತೃತ್ವದಲ್ಲಿ 101 ಋತ್ವಿಜರು ಹೋಮ ಕುಂಡವನ್ನು ರಚನೆ ಮಾಡಿ ಹೋಮ ಹವನ ನೆರವೇರಿಸುವರು. ಅಂದು ಬೆಳಗ್ಗೆ 7.30 ಗಂಟೆಗೆ ಯಾಗ ಸ್ಥಳದಲ್ಲಿ ಗಂಗಾಪೂಜೆ, ಪುಣ್ಯಾಹುತಿ, ಗೋಪೂಜೆ, ಗಣಪತಿ ಹೋಮ ನಡೆದ ಬಳಿಕ ಕಳಸ ಸ್ಥಾಪಿಸಲಾಗುತ್ತದೆ. ರಾಮದೇವರ ಬೆಟ್ಟದಿಂದ ಶ್ರೀ ರಾಮದೇವರ ಉತ್ಸವ ಮೂರ್ತಿಯನ್ನು ಬನ್ನಿಮಂಟಪಕ್ಕೆ ತಂದಿರಿಸಿದ ನಂತರ ಯಜ್ಞ ಕಾರ್ಯ ಪ್ರಾರಂಭವಾಗಲಿದೆ.

ಬನ್ನಿಮಂಟಪದಲ್ಲಿ ಬೃಹತ್ ಹೋಮ ಕುಂಡದಲ್ಲಿ 8ರಿಂದ 10 ವೈದಿಕರು ಹೋಮ ಹವನಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವರು. ಮತ್ತೊಂದೆಡೆ ಉಳಿದ ವೈದಿಕರು ಲಕ್ಷಕ್ಕೂ ಅಧಿಕ ಶ್ರೀ ರಾಮತಾರಕ ಮಂತ್ರ ಶ್ಲೋಕಗಳನ್ನು ಏಕಕಾಲದಲ್ಲಿ ಪಠಿಸುವರು.

ಶ್ರೀರಾಮ ಜಯರಾಮ ಜಯಜಯರಾಮ ಸ್ವಾಹಾಕಾರ ಮಂತ್ರ ಘೋಷದೊಂದಿಗೆ ಹೋಮ ಕುಂಡದಲ್ಲಿನ ಅಗ್ನಿಗೆ ಹಲ ವಿಧದ ಸಮಿತ್ತು, ಯಜ್ಞ ವಸ್ತುಗಳನ್ನು ಸಮರ್ಪಿಸುವರು. ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಅನೇಕ ಗಣ್ಯರು ಯಜ್ಞ ಕಾರ್ಯಗಳಲ್ಲಿ ಪಾಲ್ಗೊಳ್ಳುವರು.

ಉಪಸ್ಥಿತಿಯಿರುವ ಭಕ್ತ ಗಣ ರಾಮನಾಮ, ಹನುಮಾನ್ ಚಾಲೀಸಾ ಸ್ತ್ರೋತ್ರ ಪಠಿಸುವರು. ಯಜ್ಞ ಕಾರ್ಯದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ವಿಜಯ್ ಕುಮಾರ್ ನೇತೃತ್ವದ ತಂಡ ಮಂಗಳ ವಾದ್ಯ ನುಡಿಸಲಿದೆ.

ಭಕ್ತರಿಗೆ ಪ್ರಸಾದ ವಿನಿಯೋಗ:

ಮಧ್ಯಾಹ್ನ 12 ಗಂಟೆ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಶ್ರೀ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮತಾರಕ ಹೋಮ ಹಿಂದೂ ಧಾರ್ಮಿಕ ಆಚರಣೆಯಲ್ಲಿ ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ಹೋಮ. ಇದು ಪ್ರಭು ಶ್ರೀರಾಮನ ಆರಾಧನೆಗೆ ಸಮರ್ಪಿತವಾಗಿದೆ. ರಾಮನು ಧರ್ಮ, ಧೈರ್ಯ ಮತ್ತು ನಿಷ್ಠೆಯ ದೇವತೆಯಾಗಿ ಪೂಜಿಸಲ್ಪಡುತ್ತಾನೆ. “ತಾರಕ” ಎಂದರೆ ಮೋಕ್ಷ ಅಥವಾ ಮುಕ್ತಿ, ಈ ಹೋಮ ಕಷ್ಟಗಳ ನಿವಾರಣೆ, ಮನಃಶಾಂತಿ, ಮತ್ತು ಆಧ್ಯಾತ್ಮಿಕತೆಗೆ ಪ್ರೋತ್ಸಾಹಿಸುತ್ತದೆ ಎಂದು ಮುಖ್ಯ ಪುರೋಹಿತರಾದ ರಾಜು ಶ್ರೀನಾಥ ಶರ್ಮ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.

ಬಾಕ್ಸ್ ...............

ರಾಮ ತಾರಕ ಹೋಮದ ಉದ್ದೇಶ

-ರಾಮ ತಾರಕ ಹೋಮ ವ್ಯಕ್ತಿಯನ್ನು ಧಾರ್ಮಿಕ ಬೆಳವಣಿಗೆಯತ್ತ ಮುನ್ನಡೆಸುವಲ್ಲಿ ಮತ್ತು ಮೋಕ್ಷವನ್ನು ಹೊಂದಲು ಸಹಕಾರಿಯಾಗಿದೆ.

- ಹೋಮ ಕುಟುಂಬದ ಶಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಅಡ್ಡಿ-ತೊಡಕುಗಳನ್ನು ನಿವಾರಿಸುತ್ತದೆ.

-ರಾಮನ ಕೃಪೆಯೊಂದಿಗೆ ಜೀವಿ ಮನೋಬಲ ಮತ್ತು ಶಕ್ತಿಯನ್ನು ಪಡೆದನೆಂದು ನಂಬಲಾಗಿದೆ.

- ಹೋಮದ ಶ್ರದ್ಧೆಯ ಶಕ್ತಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಶುದ್ಧೀಕರಣ ಶಕ್ತಿ ನೀಡುತ್ತದೆ.

- ಪ್ರಭು ರಾಮನ ಆಶೀರ್ವಾದವು ಜೀವನದಲ್ಲಿ ಧರ್ಮಕ್ಕೆ ಅನುಗುಣವಾದ ಕಾರ್ಯಗಳಲ್ಲಿ ಯಶಸ್ಸನ್ನು ತರಲು ಸಹಕಾರಿಯಾಗಿದೆ.

ಬಾಕ್ಸ್ ...............

ರಾಮ ತಾರಕ ಹೋಮದ ವಿಧಾನಗಳು

- ಸಂಕಲ್ಪ(ಪ್ರಾರ್ಥನೆ): ಪೂಜಾರಿ ಮತ್ತು ಭಾಗವಹಿಸುವವರು ತಮ್ಮ ಸಂಕಲ್ಪವನ್ನು ಪ್ರಾರ್ಥಿಸುತ್ತಾರೆ, ಇದು ಆರೋಗ್ಯ, ಶಾಂತಿ, ಧರ್ಮ ಮುಂತಾದ ವಿಷಯಗಳ ಕೋರಿಕೆಯಾಗಿರಬಹುದು.

- ರಾಮನ ಆಹ್ವಾನ: ಶ್ರೀರಾಮನನ್ನು “ಓಂ ಶ್ರೀ ರಾಮಾಯ ನಮಃ” ಎಂಬ ಪವಿತ್ರ ತಾರಕ ಮಂತ್ರದ ಮೂಲಕ ಆಹ್ವಾನಿಸಲಾಗುತ್ತದೆ.

- ಹೋಮದ ಅರ್ಪಣೆಗಳು (ಅಹುತಿ): ತುಪ್ಪ, ಅಕ್ಕಿ, ಹಸಿರು ಗಿಡಗಳು ಮತ್ತು ಶುದ್ಧ ವಸ್ತುಗಳನ್ನು ಹೋಮದ ಅಂಗವಾಗಿ ಅರ್ಪಿಸಲಾಗುತ್ತದೆ.

- ರಾಮ ಮಂತ್ರ ಪಠಣೆ: ಶ್ರೀರಾಮನ ಮಂತ್ರಗಳನ್ನು ಪಠಿಸುವ ಮೂಲಕ ಈ ಹೋಮದ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ ಮತ್ತು ದೇವರ ಸಾನ್ನಿಧ್ಯವನ್ನು ಪಡೆಯಲಾಗುತ್ತದೆ.

- ಆರತಿ ಮತ್ತು ಪೂರ್ಣಾಹುತಿ: ಹೋಮದ ಅಂತಿಮವಾಗಿ ರಾಮನ ಆರತಿಯನ್ನು ಮಾಡಲಾಗುತ್ತದೆ ಮತ್ತು ಭಾಗವಹಿಸುವವರಿಗೆ ಪ್ರಸಾದ ಹಂಚಲಾಗುತ್ತದೆ.

ಕೋಟ್ ................

ರಾಮನಗರ ಕ್ಷೇತ್ರ ಸೇರಿದಂತೆ ಲೋಕಕಲ್ಯಾಣಾರ್ಥವಾಗಿ ರಾಮೋತ್ಸವ ಸಂದರ್ಭದಲ್ಲಿ ರಾಮತಾರಕ ಯಜ್ಞ ಆಯೋಜಿಸಲಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಆಧ್ಯಾತ್ಮಿಕ ಉನ್ನತಿ, ಮೋಕ್ಷ, ಶಾಂತಿ, ಆರೋಗ್ಯ, ಕ್ಷೇಮ ಹಾಗೂ ಯಶಸ್ಸನ್ನು ತರಲು ರಕ್ಷಣೆ ಜೊತೆಗೆ ಧೈರ್ಯ ಮತ್ತು ಶಕ್ತಿಯನ್ನು‌ ಪ್ರಭು ಶ್ರೀ ರಾಮ ಕರುಣಿಸಲಿ ಎಂದು‌ ಸಂಕಲ್ಪ ಮಾಡುತ್ತೇನೆ.

- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

ಕೋಟ್ ..................

ಶ್ರೀ ರಾಮನು ಪಾದ ಸ್ಪರ್ಶ ಮಾಡಿದ ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ದೊಡ್ಡ ಮಟ್ಟದಲ್ಲಿ ಶ್ರೀ ರಾಮತಾರಕ ಯಜ್ಞವನ್ನು ಆಯೋಜಿಸಿರುವುದು ಅರ್ಥಪೂರ್ಣ. ಈ ಧಾರ್ಮಿಕ ಕಾರ್ಯದಲ್ಲಿ ರಾಮನಗರದ ಸಮಸ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಬೇಕು. ಶ್ರೀರಾಮ ಮತ್ತು ಭಕ್ತರ ನಡುವಿನ ಭಕ್ತಿಯ ನಂಟು ವೃದ್ಧಿಯಾಗಲಿದೆ.

- ಸಿ.ಎನ್.ಆರ್. ವೆಂಕಟೇಶ್, ಮಾಜಿ ಅಧ್ಯಕ್ಷರು, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ

9ಕೆಆರ್ ಎಂಎನ್ 5,6,7,8.ಜೆಪಿಜಿ

5.ಶ್ರೀ ರಾಮತಾರಕ ಯಜ್ಞದ ಸಾಂದರ್ಭಿಕ ಚಿತ್ರ

6.ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

7.ಸಿ.ಎನ್.ಆರ್. ವೆಂಕಟೇಶ್ , ಮಾಜಿ ಅಧ್ಯಕ್ಷರು, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ.

8.ರಾಮೋತ್ಸವ ಲೋಗೋ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದೀರ್ಘ ಆಡಳಿತ ಸರದಾರ ಸಿದ್ದರಾಮಯ್ಯ ಅಪರೂಪದ ನಾಯಕ
ಕೊರಚ ಸಮುದಾಯದ ಕುಟುಂಬಗಳಿಗೆ ತ್ವರಿತವಾಗಿ ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಿ