ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಧ್ಯಾಹ್ನ3.10ಕ್ಕೆ ಸಲ್ಲುವ ಶುಭಲಗ್ನದಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಎಸ್ಸಿ ಎನ್.ಯತೀಶ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರೆ ಸೇರಿದಂತೆ ಇತರೆ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಪ್ರದಾಯದಂತೆ ಗರುಡ ಪಕ್ಷಿಯು ದೇವಾಲಯ ಮತ್ತು ರಥದ ಮೇಲೆ ಹಾರಾಡಿದ ಬಳಿಕ ಉತ್ಸವ ಆರಂಭವಾಯಿತು.
ಸರ್ವಾಲಂಕೃತ ರಥವನ್ನು ಯುವಕರು ಹಾಗೂ ಭಕ್ತಾದಿಗಳು ಉತ್ಸಾಹದಿಂದ ಗೋವಿಂದಾ.. ಗೋವಿಂದಾ.. ಜೈಂಕಾರದೊಂದಿಗೆ ಎಳೆದು ಸಂಭ್ರಮಿಸಿದರು. 10 ಅಡಿ ಉದ್ದದ ಕಬ್ಬಿಣದ ಸರಪಳಿಗಳನ್ನು ಹಿಡಿದು ಸ್ಪರ್ಧೆಗೆ ಬಿದ್ದವರಂತೆ ರಥವನ್ನು ಎಳೆದ ಭಕ್ತ ಸಮ್ಮೂಹ ಶ್ರೀರಂಗನಾಥನ ಜೈಂಕಾರ ಕೂಗಿ ಪ್ರಾರ್ಥನೆ ಸಲ್ಲಿಸಿದರು.ರಾಜ್ಯ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶ್ರೀರಂಗನಾಥ ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಂಡರು. ಆದಿ ರಂಗನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಪ್ರಧಾನ ಅರ್ಚಕ ವಿಜಯ ಸಾರಥಿ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಶ್ರೀರಂಗನಾಥನಿಗೆ ವಿಶೇಷ ಪೂಜೆ ನೆರವೇರಿಸಿದರು.
ರಥೋತ್ಸವದ ನಿಮಿತ್ತ ದೇವಾಲಯದಲ್ಲಿ ವಿಶೇಷ ಪೂಜೆಗಳು, ಶ್ರೀರಂಗನಾಥನಿಗೆ ಅಭಿಷೇಕ, ಅರ್ಚನೆಗಳು ಜರುಗಿದರು. ಹರಕೆ ಹೊತ್ತ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಿಸುತ್ತಿದ್ದ ದೃಶ್ಯ ಕಂಡುಬಂತು. ರಥಸಪ್ತಮಿ ರಥೋತ್ಸವಕ್ಕೆ ಹೆಚ್ಚು ಜನರು ಸೇರಿದ್ದರಿಂದ ದೇವಾಲಯದ ಮುಖ್ಯದ್ವಾರ ಇತರೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸೂರ್ಯ ಮಂಡಲ, ಚಂದ್ರ ಮಂಡಲ ಉತ್ಸವ:ರಥಸಪ್ತಮಿ ಹಿನ್ನೆಲೆಯಲ್ಲಿ ಪಟ್ಟಣದ ರಾಜ ಬೀದಿಗಳಲ್ಲಿ ಮುಂಜಾನೆ ಸೂರ್ಯಮಂಡಲ ಮತ್ತು ಚಂದ್ರ ಮಂಡಲ ಉತ್ಸವಗಳು ನಡೆದವು. ಮಂಗಳ ವಾದ್ಯಗಳ ಸಹಿತ ನಡೆದ ಉತ್ಸವಗಳಿಗೆ ದಾರಿಯುದ್ದಕ್ಕೂ ಜನರು ಪೂಜೆ ಸಲ್ಲಿಸಿದರು. ಉತ್ಸವ ಸಾಗುವ ದಾರಿಯಲ್ಲಿ ನಾಗರೀಕರು ರಸ್ತೆಯನ್ನು ಶುಭ್ರಗೊಳಿಸಿ ರಂಗೋಲಿ ಬಿಡಿಸಿ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.