ಕನ್ನಡಪ್ರಭ ವಾರ್ತೆ ಮಂಗಳೂರು
ಇದುವರೆಗೆ 34 ದಿನಗಳಲ್ಲಿ 80 ಲಕ್ಷ ರಾಮ ತಾರಕ ಮಂತ್ರ ಜಪ ಮಾಡಲಾಗಿದೆ. ಈ ಜಪವು ಗುರುವರ್ಯ ಶ್ರೀ ವಿದ್ಯಾಧೀಶ ವಡೇರ ಸಂಕಲ್ಪದಂತೆ 17ನೇ ಏಪ್ರಿಲ್ 2024 ರ ರಾಮ ನವಮಿಯಂದು ಕರ್ನಾಟಕ, ಮುಂಬಯಿ ಸೇರಿದಂತೆ ಸಂಸ್ಥಾನದ ಎಲ್ಲ ಮಠಗಳ ಶಾಖೆಗಳಲ್ಲಿ ಆರಂಭಗೊಂಡಿದೆ. ಈ ಜಪ 18 ಅಕ್ಟೋಬರ್ 2025 ರವರೆಗೆ ಮುಂದುವರಿಯಲಿದ್ದು, ಎಲ್ಲ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಅಭಿಯಾನದ ಅಂಗವಾಗಿ ಮಂಗಳೂರು ರಥಬೀದಿಯ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಶಾಖಾ ಮಠದಲ್ಲಿ ರಾಮನಾಮ ಮಂತ್ರ ಜಪ ಶ್ರೀರಾಮ ನವಮಿಯಂದು ಆರಂಭಗೊಂಡು ಮೂರು ನಾಲ್ಕು ಪಾಳಿಗಳಲ್ಲಿ ನಡೆಯುತ್ತಿದೆ. ಮೇ 19 ರಂದು 1,580 ಜಪಕರು ಒಟ್ಟು 20.83 ಲಕ್ಷ ರಾಮನಾಮ ತಾರಕ ಮಂತ್ರ ಜಪ ಮಾಡಿದ್ದಾರೆ.ಈ ಅಭಿಯಾನದಲ್ಲಿ ಕಾಸರಗೋಡು, ಕಾಂಞಗಾಡ್, ಪುತ್ತೂರು, ಉಳ್ಳಾಲ, ಸುರತ್ಕಲ್, ಗುರುಪುರ ಮತ್ತಿತರ ಕಡೆಗಳ ವೈದಿಕರು ಭಾಗವಹಿಸುತ್ತಿದ್ದಾರೆ.
ಪ್ರತಿದಿನ ಸರಾಸರಿ 2.4 ಲಕ್ಷ ಜಪವನ್ನು ಮಾಡಲಾಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ಒಂದೂವರೆ ಸಂವತ್ಸರದವರೆಗೆ ನಡೆಯುವ ಈ ಅಭಿಯಾನದಲ್ಲಿ ಸಮಾಜ ಬಾಂಧವರು ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವಂತೆ ಅಭಿಯಾನದ ಸಂಘಟಕರ ಪ್ರಕಟಣೆ ತಿಳಿಸಿದೆ.