ಕನ್ನಡಪ್ರಭ ವಾರ್ತೆ ಮದ್ದೂರು
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳು ಸಿಡಿರಾಯಣ್ಣನ ಉತ್ಸವದಲ್ಲಿ ಭಾಗವಹಿಸುವ ಮೂಲಕ ಧನ್ಯತಾಭಾವ ಮೆರೆದರು.
ಮಕ್ಕಳಾಗದವರು ಸಿಡಿರಾಯಣ್ಣನ ಉತ್ಸವದಲ್ಲಿ ಪಾಲ್ಗೊಂಡು ಮಕ್ಕಳಾಗುವಂತೆ ಹರಕೆ ಕಟ್ಟಿಕೊಂಡ ದಂಪತಿ ತಮ್ಮ ಮಕ್ಕಳನ್ನು ಕರೆತಂದು ಸಿಡಿ ಆಡಿಸುವ ಮೂಲಕ ಹರಕೆ ತೀರಿಸುತ್ತಾರೆ. ಸಿಡಿ ಉತ್ಸವದಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಒಳ್ಳೆಯದಾಗುತ್ತದೆ ಮತ್ತು ಭಕ್ತಾಧಿಗಳ ಇಷ್ಟಾರ್ಥ ಈಡೇರುತ್ತದೆ ಎಂಬುವುದು ಭಕ್ತಾಧಿಗಳ ನಂಬಿಕೆಯಾಗಿರುವುದರಿಂದ ಸಿಡಿರಾಯಣ್ಣ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದು ವಿಶೇಷ.ಸಂಜೆ 4 ಗಂಟೆಗೆ ಭಕ್ತರಿಂದ ಬಾಯಿ ಬೀಗ ಸೇವೆ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿಡಿರಾಯಣ್ಣನ ಉತ್ಸವ ಬಂದಾಗ ಭಕ್ತಾಧಿಗಳು ಸಿಡಿರಾಯಣ್ಣ ಮೇಲೆ ಪುರಿಯನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಮದ್ದೂರಮ್ಮನ ದೇವಾಲಯದ ಆವರಣದಲ್ಲಿ ಸಿಡಿರಾಯಣ್ಣನ ಉತ್ಸವ ಅದ್ಧೂರಿಯಾಗಿ ನೆರವೇರಿತು. ಸಿಡಿರಾಯಣ್ಣನ ಉತ್ಸವದಲ್ಲಿ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಕ್ತಾಧಿಗಳಿಗೆ ಮಜ್ಜಿಗೆ, ಪಾನಕ, ಪ್ರಸಾದ ವಿತರಣೆ ಮಾಡುವ ಮೂಲಕ ಗಮನ ಸೆಳೆದರು.ಮೇ 3 ರಂದು ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನವರಿಗೆ ಓಕಳಿ ಸೇವೆ, ಸಂಜೆ 6.30 ಗಂಟೆಗೆ ಉಯ್ಯಾಲೆ ಉತ್ಸವ, ರಾತ್ರಿ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ (ಹೂವಿನ ವ್ಯಾಪಾರಸ್ಥರಿಂದ) ನಡೆಯುವುದು.
ಮೇ 4 ರಂದು ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 9 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮಠಮನೆ ತಲುಪುವ ಮೂಲಕ ಶ್ರೀ ಮದ್ದೂರಮ್ಮನ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.