ಸಂಭ್ರಮದಿಂದ ನಡೆದ ಶ್ರೀಬಡಗೂಡಮ್ಮದೇವಿ ರಥೋತ್ಸವ

KannadaprabhaNewsNetwork | Published : Apr 20, 2025 1:58 AM

ಸಾರಾಂಶ

ನಾಗಮಂಗಲ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹತ್ತು ಗ್ರಾಮಗಳ ಅಧಿದೇವತೆ ಶ್ರೀಬಡಗೂಡಮ್ಮದೇವಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣ ಸೇರಿದಂತೆ ಸುತ್ತಮುತ್ತಲ ಹತ್ತು ಗ್ರಾಮಗಳ ಅಧಿದೇವತೆ ಶ್ರೀಬಡಗೂಡಮ್ಮದೇವಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಏ.16ರಂದು ಅಮ್ಮನವರಿಗೆ ಹೂವಿನಚಪ್ಪರ ಹಾಗೂ ಪಟ್ಟಣದ ಒಳಸುತ್ತಿನ ಮೆರವಣಿಗೆ ನಡೆಯಿತು. ಏ.17ರ ಗುರುವಾರ ಹತ್ತು ಹಳ್ಳಿಗಳ ಗ್ರಾಮಸ್ಥರಿಂದ ಇಡೀರಾತ್ರಿ ರಂಗಕುಣಿತ, ಪೂಜಾ ಕಾರ್ಯಗಳು ನೆರವೇರಿದವು. ಏ.18ರ ಶುಕ್ರವಾರ ಬೆಳಗಿನಿಂದ ಸಂಜೆವರೆಗೆ ಅಲಂಕಾರಭೂಷಿತಳಾದ ಶ್ರೀಬಡಗೂಡಮ್ಮದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹೋಮ-ಹವನಾದಿ ಕಾರ್ಯಕ್ರಮಗಳೊಂದಿಗೆ ಅಭಿಷೇಕ, ಮಹಾಮಂಗಳಾರತಿ ನಂತರ ಸಂಜೆ ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ಶನಿವಾರ ಮುಂಜಾನೆ 5 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಯ ದೇವರಗುಡ್ಡಪ್ಪ ಪೂಜೆಯೊಂದಿಗೆ ಕೊಂಡ ಹಾಯ್ದರು. ಮಧ್ಯಾಹ್ನ ಪಟ್ಟಣದ ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿಯ ನೂರಾರು ವಕ್ಕಲುಗಳು ತಂಬಿಟ್ಟು ಬಾಳೆಹಣ್ಣು ತುಂಬಿದ ಬುಟ್ಟಿ ಸಮೇತ, ಶ್ರೀದೇವಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿದ್ದ ಟ್ರ್ಯಾಕ್ಟರ್‌ನಲ್ಲಿರಿಸಿ, ವೀರಗಾಸೆ, ಪೂಜಾ ಕುಣಿತ, ಸೋಮನಕುಣಿತ ಹಾಗೂ ತಮಟೆ ಮೇಳದೊಂದಿಗೆ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಟಿ.ಬಿ. ಬಡಾವಣೆಯ ಮೂಲದೇವಸ್ಥಾನಕ್ಕೆ ಕರೆತರಲಾಯಿತು.

ಸಂಜೆ 5.30ರ ಗೋಧೂಳಿ ಲಗ್ನದಲ್ಲಿ ನಡೆದ ಅಮ್ಮನವರ ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು ಮತ್ತು ನಾಡಿನ ವಿವಿದೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು, ರಥದ ಕಳಶಕ್ಕೆ ಬಾಳೆಹಣ್ಣು ಜವನ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಸಿದರು.

ನೂತನ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

ಮಂಡ್ಯ: ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಕೃಷಿಕ ಅಲಯನ್ಸ್ ಸಂಸ್ಥೆ ಆಶ್ರಯದಲ್ಲಿ ಏ.20ರಂದು ಅಲೈ ಎ.ಆರ್.ಕುಮಾರ್ ಮತ್ತು ತಂಡದ ನೂತನ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ದ್ವಿತೀಯ ಪಿಯುಪಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ನಗರದ ಸ್ಪೋರ್ಟ್ ಕ್ಲಬ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಅಲೈಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ ವಿಭೈರಿ ಉದ್ಘಾಟಿಸುವರು. ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಧ್ಯಕ್ಷತೆ ವಹಿಸುವರು. ಅಂತಾರಾಷ್ಟ್ರೀಯ ಅಲೈಯನ್ಸ್ ಸಂಸ್ಥೆ ನಿರ್ದೇಶಕ ಎಚ್.ಮಾದೇಗೌಡ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡುವರು.

Share this article