ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಹಿಂದೂ ದೇವಾಲಯಗಳ ಅರ್ಚಕರ ಸಂಘದ ಶ್ರೀಧರಮೂರ್ತಿ ಒತ್ತಾಯ

KannadaprabhaNewsNetwork | Published : Aug 29, 2024 12:46 AM

ಸಾರಾಂಶ

ಅರ್ಚಕರು ಮೃತರಾದರೆ ೨ ಲಕ್ಷ ರು. ಪರಿಹಾರ ಹಾಗೂ ಅರ್ಚಕರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಬೇಕು ಎಂದು ಚನ್ನರಾಯಪಟ್ಟಣ ತಾಲೂಕು ಹಿಂದೂ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ತಿಳಿಸಿದರು. ಬೆಂಗಳೂರಿನಲ್ಲಿ ಆಯುಕ್ತ ಡಾ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಮಾತನಾಡಿದರು.

ಆಯುಕ್ತರಿಗೆ ಬೇಡಿಕೆ । ಸರ್ಕಾರದ ಎಲ್ಲ ಸೌಲಭ್ಯಗಳ ನೀಡಲು ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅರ್ಚಕರು ಮೃತರಾದರೆ ೨ ಲಕ್ಷ ರು. ಪರಿಹಾರ ಹಾಗೂ ಅರ್ಚಕರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಬೇಕು ಎಂದು ತಾಲೂಕು ಹಿಂದೂ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ತಿಳಿಸಿದರು.

ಬೆಂಗಳೂರಿನಲ್ಲಿ ಇರುವ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಶ್ರೀಮಿಂಟೋ ಆಂಜನೇಯ ಭವನದಲ್ಲಿನ ನೂತನ ಆಯುಕ್ತ ಡಾ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಮಾತನಾಡಿದರು. ಈಗಾಗಲೆ ಸರ್ಕಾರ ಅರ್ಚಕರ ಅನುಕೂಲಕ್ಕೆ ಸಾಕಷ್ಟು ಆದೇಶವನ್ನು ಮಾಡಿದೆ. ಆದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ, ದಯಮಾಡಿ ಸರ್ಕಾರ ಅದೇಶದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಆಶ್ರಯ ಮನೆ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಸುತ್ತೋಲೆ ನೀಡಿದೆ, ಅದು ಜಾರಿಗೆ ಬಂದಿಲ್ಲ, ಅರ್ಚಕರ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರನ್ನು ಸರ್ಕಾರದ ಅಧೀನದಲ್ಲಿನ ದೇವಾಲಯಕ್ಕೆ ನೇಮಕ ಮಾಡಿಕೊಳ್ಳುವಂತಿಲ್ಲ. ಅದರೂ ಕೆಲ ಜಿಲ್ಲೆಯಲ್ಲಿ ಸರ್ಕಾರ ಆದೇಶವನ್ನು ಬದಿಗೆ ಇಟ್ಟು ಹೊಸರಬರಿಗೆ ನೀಡುತ್ತಿದ್ದಾರೆ. ಈ ಬಗ್ಗೆ ತಾವು ಗಮನ ಹರಿಸಬೇಕು ಎಂದು ಹೇಳಿದರು.

ಅರ್ಚಕ ಮೃತರಾದರೆ ೨ ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಮೂರು ವರ್ಷದ ಹಿಂದೆ ಇಲಾಖೆ ಆಯುಕ್ತರು ಆದೇಶ ಮಾಡಿದ್ದು ಅದು ಕಾರ್ಯರೂಪಕ್ಕೆ ಬಂದಿಲ್ಲ, ದೇವಾಲಯದ ಹೆಸರಿನಲ್ಲಿ ಇರುವ ಆಸ್ತಿಯನ್ನು ಅನ್ಯರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ಧಾರೆ ಇದು ಪುನಃ ದೇವಾಲಯದ ಹೆಸರಿಗೆ ಅಥವಾ ದೇವಾಲಯ ಪೂಜೆ ಮಾಡುವ ಅರ್ಚಕರ ಹೆಸರಿಗೆ ಆಗಬೇಕು. ಈ ಬಗ್ಗೆ ತಾಲೂಕು ಆಡಳಿತಗಳು ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮುಜರಾಯಿ ಮಂತ್ರಿ ರಾಮಲಿಂಗರೆಡ್ಡಿ ಅಚರ್ಕರ ಅನುಕೂಲಕ್ಕಾಗಿ ರಿಯಾಯತಿ ದರದಲ್ಲಿ ಯಾತ್ರೆಗೆ ಅವಕಾಶ ನೀಡಿದ್ಧಾರೆ. ಆದರೆ ಜಿಲ್ಲಾಡಳಿತದಿಂದ ಸಹಕಾರ ದೊರೆಯುತ್ತಿಲ್ಲ ಎಂದರು.

ಅರ್ಚಕರ ಸಂಘದವರಿಂದ ಸಮಸ್ಯೆಗಳನ್ನು ಆಲಿಸಿ ಆಯುಕ್ತ ಡಾ.ವೆಂಕಟೇಶ್ ಮಾತನಾಡಿ, ಸರ್ಕಾರ ಆದೇಶ ಮಾಡಿರುವುದನ್ನು ಜಿಲ್ಲಾಧಿಕಾರಿಗಳ ಮೂಲಕ ಮುಜರಾತಿ ಇಲಾಖೆಗೆ ಅಧಿಕಾರಿಗಳಿಗೆ ತಲುಪಿಸಲಾಗುವುದು, ಸರ್ಕಾರ ಆದೇಶದ ಅನ್ವಯ ಎಲ್ಲಾ ಯೋಜನೆಗಳನ್ನು ಸಕಾಲಕ್ಕೆ ಅರ್ಚಕರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು, ಮೈಸೂರು ಸೇರಿದಂತೆ ಸಾಕಷ್ಟು ಸರ್ಕಾರಿ ದೇವಾಲಯಗಳ ಸುತ್ತ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಬಿಡಿಸಲಾಗುವುದು. ಈ ಬಗ್ಗೆ ಅರ್ಚಕರು ಇಲಾಖೆ ಮೂಲಕ ಮಾಹಿತಿ ನೀಡಿದರೆ ಸರ್ವೆ ಕಾರ್ಯ ಮಾಡಿಸಲಾಗುತ್ತದೆ, ಸಕಾಲಕ್ಕೆ ಅರ್ಚಕರ ಗೌರವಧನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡಲಾಗುತ್ತದೆ, ಅರ್ಚಕರ ಆಧಾರ್ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರ್ ಲಿಂಕ್ ಮಾಡುವ ಮೂಲಕ ನೇರವಾಗಿ ಗೌರವ ಧನ ಖಾತೆಗೆ ಜಮೆ ಆಗುವಂತೆ ಮಾಡಲಾಗುವುದು ಎಂದರು.

ಅರ್ಚಕ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ರಾಮಚಂದ್ರಪ್ಪ, ನುಗ್ಗೇಹಳ್ಳಿ ಹೋಬಳಿ ಉಪಾಧ್ಯಕ್ಷ ಆನಂದ್, ಶ್ರವಣಬೆಳಗೊಳ ಹೋಬಳಿ ನಾಗರಾಜು ಸಿಂಗ್, ಪದಾಧಿಕಾರಿಗಳಾದ ಯೋಗಾನಂದ್, ಕಿರಣ್‌ಕುಮಾರ್, ಬಸವರಾಜು, ಗೀತರಾಜು, ವೆಂಕಟಾಚಲಯ್ಯ, ಇತರರು ಇದ್ದರು.

Share this article