ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಲ್ಕನೇ ವರ್ಷದ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನದ ಗುರು ದಂಪತಿ ಲೀಲಾವತಿ ಬೈಪಡಿಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಡಿತ್ತಾಯ ಹೆಸರಿನಲ್ಲಿ ನೀಡಲಾಗುವ 2024ನೇ ಸಾಲಿನ ಪ್ರತಿಷ್ಠಿತ ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರವನ್ನು ಹಿರಿಯ ಯಕ್ಷಗಾನ ಗುರು, ಮದ್ದಲೆಗಾರ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಡಿತ್ತಾಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೌಂಡೇಶನ್ ಸಹಯೋಗದಲ್ಲಿ ಶಿಷ್ಯವೃಂದ ಏರ್ಪಡಿಸಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪೊಳಲಿ ಕ್ಷೇತ್ರದ ಆಡಳಿತ ಮಂಡಳಿ ಸಹಕಾರದೊಂದಿಗೆ ಅ.13 ರಂದು ಮಧ್ಯಾಹ್ನ 2 ಗಂಟೆಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಪ್ರಶಸ್ತಿ 10,078 ರು. ನಗದು, ಬಿನ್ನವತ್ತಳೆ ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದರು.ಯಕ್ಷ-ಗಾನ-ನಾದ ವೈಖರಿ: ಅ.13ರಂದು ಮಧ್ಯಾಹ್ನ 2 ರಿಂದ ಬೈಪಡಿತ್ತಾಯರ ಶಿಷ್ಯರಿಂದ ಯಕ್ಷ-ಗಾನ- ನಾದ ವೈಖರಿ ಎಂಬ ಯಕ್ಷಗಾನೀಯ ಪದ್ಯಗಳ ಹಾಡುಗಾರಿಕೆ ಪ್ರಸ್ತುತಿಗೊಳ್ಳಲಿದೆ. ಈಗಾಗಲೇ ರಂಗದಲ್ಲಿ ಹೆಸರು ಮಾಡಿರುವ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಶ್ರೀನಿವಾಸ ಬಳ್ಳಮಂಜ, ಗಿರೀಶ್ ರೈ ಕಕ್ಕೆಪದವು, ಅಡೂರು ಜಯರಾಮ, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಯಕ್ಷಗಾನ ಹಾಡುಗಳನ್ನು ಪ್ರಸ್ತುತಪಡಿಸುವರು. ಚೆಂಡೆ-ಮದ್ದಳೆಯಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್, ಶಂಕರ ಭಟ್ ಕಲ್ಮಡ್ಕ, ಸೋಮಶೇಖರ್ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ಗುರುಪ್ರಸಾದ್ ಬೊಳಿಂಜಡ್ಕ, ವಿಕಾಸ ರಾವ್ ಕೆರೆಕಾಡು, ಆನಂದ ಗುಡಿಗಾರ್, ಚಂದ್ರಶೇಖರ ಭಟ್ ಕೊಂಕಣಾಜೆ, ಹರೀಶ್ ರಾವ್ ಅಡೂರು, ಅವಿನಾಶ್ ಬೈಪಡಿತ್ತಾಯ, ಸಮರ್ಥ ಉಡುಪ ಮತ್ತಿತರರು ಭಾಗವಹಿಸುವರು. ಬಳಿಕ 15 ಚೆಂಡೆಗಳಲ್ಲಿ ಹರಿನಾರಾಯಣ ಬೈಪಡಿತ್ತಾಯರ ಪರಿಕಲ್ಪನೆ, ಸಂಯೋಜನೆಯಲ್ಲಿ ಶಿಷ್ಯವೃಂದದವರು ವಿಶಿಷ್ಟ‘ಅಬ್ಬರತಾಳ’ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.ಪ್ರಶಸ್ತಿ ಪ್ರದಾನ: ನಂತರ ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಲ್ಕನೇ ವರ್ಷದ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಪೊಳಲಿ ಆಡಳಿತಾಧಿಕಾರಿ ಪ್ರವೀಣ್, ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಎ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಭಾಗವಹಿಸುವರು. ಪುರುಷೋತ್ತಮ್ ಭಟ್ ನಿಡುವಜೆ ಅಭಿನಂದನಾ ಮಾತನ್ನಾಡುವರು ಎಂದರು.ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ಬಳ್ಳಮಂಜ, ಆನಂದ ಗುಡಿಗಾರ್, ಕಿನಿಲಕೋಡಿ ಗಿರೀಶ್ ಭಟ್, ಚಂದ್ರಶೇಖರ ಭಟ್ ಕೊಂಕಣಾಜೆ, ಹರೀಶ್ ರಾವ್ ಅಡೂರು ಹಿಮ್ಮೇಳದಲ್ಲಿ ಹಾಗೂ ಡಾ. ಎಂ. ಪ್ರಭಾಕರ ಜೋಶಿ, ಹರೀಶ್ ಬಳಂತಿಮೊಗರು ಹಾಗೂ ದಿನೇಶ್ ಶೆಟ್ಟಿಕನ್ನಡಿಕಟ್ಟೆ ಅವರ ಮುಮ್ಮೇಳದಲ್ಲಿ ಯಕ್ಷಗಾನ ತಾಳಮದ್ದಳೆ ‘ಸುಧನ್ವ ಮೋಕ್ಷ’ ನೆರವೇರಲಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಿತಿ ಸದಸ್ಯರಾದ ಚಂದ್ರಶೇಖರ ಭಟ್ ಕೊಂಕಣಾಜೆ, ಆನಂದ ಗುಡಿಗಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.