ಪಾಂಡವಪುರ:
ಗ್ರಾಮದ ವಿಶ್ವಕರ್ಮ ಸಮುದಾಯದ ಕುಲದೇವತೆ ಶ್ರೀಕಾಳಿಕಾಂಭ ಕಮಠೇಶ್ವರಿ ಅಮ್ಮನವರ ಉತ್ಸದ ಅಂಗವಾಗಿ ಗ್ರಾಮದ ಎಲ್ಲಾ ಬೀದಿಗಳಲ್ಲೂ ವಿದ್ಯುತ್ ದೀಪಲಂಕಾರದಿಂದ ಅಲಂಕರಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಹಬ್ಬದ ಅಂಗವಾಗಿ ಶ್ರೀಕಾಳಿಕಾಂಭ ಕಮಠೇಶ್ವರಿ ಅಮ್ಮನವರ ಮೂರ್ತಿಯನ್ನು ಗ್ರಾಮದ ಹೊರವಲಯದಲ್ಲಿ ಇರುವ ಲೋಕಪಾವನಿ ನದಿ ತೀರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಉತ್ಸವ ರೆಡಿ ಮಾಡಿ ದೇವಿಗೆ ಕೀರಿಟಧಾರಣೆ ಮಾಡಿ ಹೂವು ಹೊಂಬಾಳೆಗಳಿಂದ ಅಲಂಕರಿಸಲಾಯಿತು.ಬಳಿಕ ಅಲ್ಲಿಂದ ಮೆರವಣಿಗೆಯ ಮೂಲಕ ಗ್ರಾಮಕ್ಕೆ ತರಲಾಯಿತು. ಗ್ರಾಮದಲ್ಲಿ ರಾತ್ರಿ ಇಡೀ ಮೆರವಣಿಗೆ ವಿಜೃಂಬಣೆಯಿಂದ ನಡೆಸಲಾಯಿತು. ಉತ್ಸವವು ಮನೆ ಮುಂದೆ ಬರುತ್ತಿದ್ದಂತೆಯೇ ಭಕ್ತರು ದೇವಿ ಉತ್ಸವಕ್ಕೆ ಪೂಜೆಸಲ್ಲಿಸಿ ಭಕ್ತಿಭಾವ ಪ್ರದರ್ಶಿಸಿದರು. ಗ್ರಾಮದಲ್ಲಿ ಶ್ರೀಕಾಳಿಕಾಂಭ ಕಮಠೇಶ್ವರಿ ಅಮ್ಮನವರ ಉತ್ಸವವು ಮೆರವಣಿಗೆ ನಡೆಸುವಾಗ ಭಕ್ತರು, ಯುವಕರು ದೇವಿಗೆ ಹೂ ಮಳೆ ಸುರಿಸಿದರು, ಉತ್ಸವದ ಮುಂದೆ ಗಗನಕ್ಕೆ ಆರುವ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.
ವೈಭವವಾಗಿ ನಡೆದ ಬೆಟ್ಟದರಸಮ್ಮನ ಕೊಂಡೋತ್ಸವ
ಸಮೀಪದ ಗುಂಡಾಪುರ ಗ್ರಾಮದ 9 ಹಳ್ಳಿಗಳ ಗ್ರಾಮ ದೇವತೆಯಾದ ಬೆಟ್ಟದರಸಮ್ಮನ ಜಾತ್ರೆ ಒಂದು ವಾರಗಳ ಕಾಲ ಯಶಸ್ವಿಯಾಗಿ ನಡೆದ ನಂತರದ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ಗುರುವಾರ ಬೆಳಗಿನ ಜಾವ ಕೊಂಡೋತ್ಸವ ನಡೆಯಿತು.
ಅರ್ಚಕರು ವಿವಿಧ ಪೂಜೆ ನೆರವೇರಿಸಿದರು. ಮುತ್ತೈದೆಯರು ಆರತಿ ನೀಡಿ ಭಕ್ತಿ ಸಮರ್ಪಣೆ ಮಾಡಿದರು. ನಂತರ ಉಯ್ಯಾಲೆ ಕಂಬಗಳ ಬಳಿಯಿಂದ ನರಿಕಲ್ಲಿನವರೆಗೂ ದೇವರ ಬೀದಿಯ ಮುತ್ತೈದೆಯರು ನೀಡುವ ತಂಬಿಟ್ಟಿನಾರತಿ ತಟ್ಟೆಗಳಲ್ಲಿ ಬಿಡಿಸಿದ್ದ ಬಣ್ಣ ಬಣ್ಣದ ರಂಗೋಲಿ ಗಮನ ಸೆಳೆಯಿತು.
ಶ್ರೀ ಅಮ್ಮನವರ ಅರ್ಚಕರಗಳು, ಹೆಬ್ಬಾರೆಗಳ ಗುಡ್ಡರುಗಳು, ಮಡಿವಾಳರು, ಪಂಜಿನ ಸೇವೆ ಮಾಡುವವರು, ತಮ್ಮ ಸೇವೆಗೈದು ಪುನೀತರಾದರು, ಹರಕೆ ಹೊತ್ತ ಭಕ್ತಾದಿಗಳು ಕೊಂಡ ಮುಗಿದ ನಂತರ ಅಗ್ನಿಗೆ ಅರಳು, ಯಾಲಕ್ಕಿ ಕಾಯಿಗಳನ್ನು ಹಾಕಿ ತಮ್ಮ ಇಷ್ಟಾರ್ಥಗಳು ಈಡೇರಿಸುವಂತೆ ಕೋರಿಕೊಂಡರು.