ಕನ್ನಡಪ್ರಭ ವಾರ್ತೆ ನಂಜನಗೂಡು
ಚಿಕ್ಕ ಜಾತ್ರಾ ಮಹೋತ್ಸವದಲ್ಲಿ ಪ್ರಮುಖವಾಗಿ ಮೂರು ರಥಗಳು ಜರುಗಲಿದ್ದು, ಮೊದಲು ಗಣಪತಿ ಮತ್ತು ಚಂಡಿಕೇಶ್ವರ, ಎರಡೆಯನೆಯದಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ, ಮನೋನ್ಮಣಿ ಅಮ್ಮನವರ ರಥಗಳು ರಥ ಬೀದಿಯಲ್ಲಿ ಚಲಿಸಲಿವೆ.
ಚಿಕ್ಕ ಜಾತ್ರಾ ಮಹೋತ್ಸವ ಅಂಗವಾಗಿ ರಥಗಳನ್ನು ವಿಶೇಷವಾಗಿ ಕಂಗೊಳಿಸುವಂತೆ ಬಣ್ಣ ಬಣ್ಣದ ಬಾವುಟ, ಬಟ್ಟೆಯ ಬಾವುಟಗಳಿಂದ ಸಿಂಗರಿಸಲಾಗಿದೆ. ರಥೋತ್ಸವದಂದು ರಥದಲ್ಲಿ ವಜ್ರ ವೈಡುರ್ಯಖಚಿತ ಶ್ರೀಕಂಠೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಇರಿಸಿ ಅವರನ್ನು ಹೂವಿನ ಅಲಂಕಾರದಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ.ಅಲ್ಲದೇ, ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶ್ರೀಕಂಠೇಶ್ವರ ಸ್ವಾಮಿ ಅವರಿಗೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ, ಮೊದಲಿಗೆ ಏಕದಶಾವರ ರುದ್ರಾಭಿಷೇಕ, ಕ್ಷೀರಾಭಿಷೇಕ, ರತ್ನಾಭಿಷೇಕ, ಫಲಮಂಚಾಮೃತಾಭಿಷೇಕ, ಗಣಪತಿ ಪೂಜೆ, ನವಗ್ರಹ ಪೂಜೆಗಳು ಜರುಗಿದ ನಂತರ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಅವರನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಈ ಅಮೃತ ಘಳಿಗೆಯನ್ನೇ ಕಾತರದಿಂದ ಕಾಯುತ್ತಿದ್ದ ಸಾವಿರಾರು ಸಂಖ್ಯೆಯ ಶ್ರೀಕಂಠೇಶ್ವರ ಸ್ವಾಮಿಯವರ ಭಕ್ತಾದಿಗಳು ಪುಳಕಿತಗೊಂಡು ಹಗ್ಗವನ್ನು ಹಿಡಿದು ಜೈ ಶ್ರೀಕಂಠ. ಜೈ ನಂಜುಡ, ಜೈ ಪಾರ್ವತಿದೇವಿ ಎಂಬ ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೊಗುತ್ತಾ ರಥವನ್ನು ಎಳೆಯುತ್ತಾರೆ. ರಥವು ರಾಜಗಾಂಭೀರ್ಯತೆಯಿಂದ ಚಲಿಸುವುದನ್ನು ನೋಡಿ ಭಕ್ತರು ಭಾವಪರವಶರಾಗಿ ಪುಳಕಿತರಾಗುತ್ತಾರೆ.
ನ. 19ರ ಬೆಳಗ್ಗೆ ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ನಂತರ ರಾತ್ರಿ 7ಕ್ಕೆ ಕಪಿಲಾ ನದಿ ತೀರದ ತೇಲುವ ತೇವಾಲಯದಲ್ಲಿ ಪಾರ್ವತಿ ದೇವಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವವು ನಡೆಯಲಿವೆ.