ಕನ್ನಡಪ್ರಭ ವಾರ್ತೆ, ದಾವಣಗೆರೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಅಂತರ ರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್)ದಿಂದ ಆ.26 ಮತ್ತು 27ರಂದು ನಗರದ ವಿನೋಬ ನಗರದ ದಾ-ಹ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಇಸ್ಕಾನ್ ಸಂಸ್ಥೆ ಮುಖ್ಯಸ್ಥ ಅವಧೂತ ಚಂದ್ರದಾಸ್ ಪ್ರಭು ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಇಸ್ಕಾನ್ ಸಂಸ್ಥೆ ವತಿಯಿಂದ 2014ರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಪ್ರಾರಂಭಿಸಿದೆ. ಈ ಸಲ ದಶಮಾನೋತ್ಸವ ಅಂಗವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.
ಆ.26ರ ಸಂಜೆ 5ರಿಂದ ಮಧ್ಯರಾತ್ರಿ 12ರವರೆಗೆ ಶ್ರೀಕೃಷ್ಣನಿಗೆ ಮಂಗಳಾರತಿ, ಸಂಕೀರ್ತನೆ, ಭಜನೆ ಹಾಗೂ ಶ್ರೀ ರಾಧಾಕೃಷ್ಣ ಅಭಿಷೇಕ, ನೃತ್ಯ ರೂಪಕ, ಮಹಾ ಮಂಗಳಾರತಿ ನಡೆಯಲಿದೆ. ಅನಂತರ ಅಭಿಷೇಕ ಸೇವೆಯೂ ಸಹ ಆಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.ಆ.27ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ಕೀರ್ತನೆ, ಭಜನೆ, ಪ್ರವಚನ, ನುಡಿನಮನ, ಪುಷ್ಪಾಂಜಲಿ, ಆರತಿ ನಡೆಯಲಿದೆ. ಇಸ್ಕಾನ್ ಸಂಸ್ಥೆ ಸಂಸ್ಥಾಪಕ ಆಚಾರ್ಯ ಭಕ್ತಿ ದೇವಾದಂತ ಸ್ವಾಮಿ ಪ್ರಭುಪಾದರ ಜನ್ಮದಿನ ಅಂಗವಾಗಿ ಶ್ರೀಲ ಪ್ರಭುಪಾದರ ವ್ಯಾಸ ಪೂಜಾ ಮಹೋತ್ಸವವನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.
ಇಸ್ಕಾನ್ ಸಂಸ್ಥೆಯ ಪಿ.ಸತ್ಯನಾರಾಯಣ ರೆಡ್ಡಿ, ನಾರಾಯಣ ಸೇವಾಪ್ರಭು, ಗೌರಹರಿದಾಸ್, ಶ್ರೀಕಾಂತ್ ಇದ್ದರು.- - -
ಕೋಟ್ ವಿಷ್ಣುವಿನ ದಶಾವತಾರದಲ್ಲಿ ಅತಿ ಮುಖ್ಯವಾದ ಶ್ರೀ ಕೃಷ್ಣನ ಅವತಾರದಲ್ಲಿ ಭಗವಂತ ಎಲ್ಲರಿಗೂ ಒಳಿತು ಬಯಸುವರು. ಶ್ರೀಕೃಷ್ಣ ಭಗವಂತನ ಲೀಲೆಯೆಂದರೆ ನಿತ್ಯಲೀಲೆ ಇದ್ದಂತೆ. ಜಗತ್ತಿನ ಅಂಧಕಾರ, ಅಜ್ಞಾನ ದೂರ ಮಾಡುವ ಶ್ರೀ ಕೃಷ್ಣ ಪರಮಾತ್ಮನ ಲೀಲೆ ಬಗ್ಗೆ ಭಕ್ತಸಾಗರಕ್ಕೆ ತಿಳಿಸುವ ಉದ್ದೇಶದಿಂದ ಅದ್ಧೂರಿಯಾಗಿ, ವಿಜೃಂಭಣೆಯಿಂದ ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಾಗುತ್ತದೆ- ಅವಧೂತ ಚಂದ್ರದಾಸ್ ಪ್ರಭು, ಇಸ್ಕಾನ್
- - --24ಕೆಡಿವಿಜಿ4:
ದಾವಣಗೆರೆಯಲ್ಲಿ ಇಸ್ಕಾನ್ ಸಂಸ್ಥೆಯ ಅವಧೂತ ಚಂದ್ರದಾಸ್ ಪ್ರಭು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.