ಮೀನುಗಾರರಿಗೆ ಬಲೆ, ತೆಪ್ಪ ಒದಗಿಸುತ್ತೇವೆ: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Aug 25, 2024, 01:54 AM IST
24ಎಚ್‌ಪಿಟಿ1- ಹೊಸಪೇಟೆಯ ಜಿಪಂ ಸಭಾಂಗಣದಲ್ಲಿ ಶನಿವಾರ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಮೀನುಗಾರರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿದರು. ಶಾಸಕ ಎಚ್.ಆರ್. ಗವಿಯಪ್ಪ ಇದ್ದರು. | Kannada Prabha

ಸಾರಾಂಶ

ಜಲಾಶಯದ ಗೇಟ್‌ ಕಿತ್ತು ಬಂದಾಗ ಮೀನುಗಾರರ ಬಲೆ, ತೆಪ್ಪಗಳು ತೇಲಿ ಹೋಗಿವೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ 19 ಕಳಚಿ ಬಿದ್ದ ಬಳಿಕ ರೈತರು, ಮೀನುಗಾರರು ಸಂಕಷ್ಟ ಅನುಭವಿಸಿದ್ದಾರೆ. ಜಲಾಶಯದ ಮೀನುಗಾರರಿಗೆ ಬಲೆ, ತೆಪ್ಪ ಒದಗಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಮೀನುಗಾರರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಾಶಯದ ಗೇಟ್‌ ಕಿತ್ತು ಬಂದಾಗ ಮೀನುಗಾರರ ಬಲೆ, ತೆಪ್ಪಗಳು ತೇಲಿ ಹೋಗಿವೆ. ಈಗ ಮೀನುಗಾರರಿಗೆ ಬಲೆ, ತೆಪ್ಪಗಳನ್ನು ನೀಡಲಾಗುವುದು. ಜಲಾಶಯದ ಗೇಟ್ ಮುರಿದಾಗ ಮೀನುಗಾರರಿಗೂ ತೊಂದರೆ ಆಗಿದೆ. ಇದನ್ನು ಗಮನಿಸಿಯೇ ಖುದ್ದು ಪರಿಶೀಲನೆಗೆ ಬಂದಿರುವೆ ಎಂದರು.

ವಿಜಯನಗರ ಹೊಸ ಜಿಲ್ಲೆ ಆಗಿದೆ. ಮೀನುಗಾರಿಕಾ ಇಲಾಖೆಗೆ ಜಿಲ್ಲಾ ಮಟ್ಟದ ಕಚೇರಿಯನ್ನು ಶೀಘ್ರದಲ್ಲೇ ತೆರೆಯಲಾಗುವುದು. ಈಗಾಗಲೇ ಪರವಾನಗಿ ಕೂಡ ನೀಡಲಾಗಿದೆ. ಜಿಲ್ಲಾ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿ ಜತೆಗೂ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಐಸ್‌ ಪ್ಲಾಂಟ್ ನಿರ್ಮಾಣ ಮಾಡಲಾಗುವುದು. ಮೀನಿನ ಸ್ಟೋರೇಜ್ ನಿರ್ಮಿಸಲಾಗುವುದು. ಜೊತೆಗೆ ಮೀನಿನ ಹೋಟೆಲ್ ಕೂಡ ನಿರ್ಮಿಸಲಾಗುವುದು ಎಂದರು.

ಈ ಭಾಗದಲ್ಲಿ ಮೀನುಗಾರರು ತೆಪ್ಪ ಬಳಸುತ್ತಾರೆ. ಈ ಭಾಗದ ಮೀನುಗಾರರು ಬಯಸಿದರೆ, ಬೋಟಿಂಗ್ ಬಳಕೆಗೆ ಎಂಜಿನ್‌ ಒದಗಿಸಲಾಗುವುದು. ಮೀನುಗಾರರ ಹಿತ ಕಾಪಾಡುವ ಕೆಲಸ ಮಾಡಲಾಗುವುದು. ಮಾಲವಿ ಜಲಾಶಯದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಮೀನುಗಾರರಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಜಯನಗರ ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಲೋಪದೋಷ ಕಂಡು ಬಂದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 50 ಕೆಜಿ ಐಸ್‌ ಬಾಕ್ಸ್‌ಗೆ ₹50 ತೆಗೆದುಕೊಳ್ಳಬೇಕು. ಆದರೆ, ತುಂಗಭದ್ರಾ ಜಲಾಶಯದ ಐಸ್‌ ಪ್ಲಾಂಟ್‌ನಲ್ಲಿ ₹170 ತೆಗೆದುಕೊಳ್ಳಲಾಗುತ್ತಿದೆ. ಹಾಗಾಗಿ ಈಗ ಮೀನುಗಾರಿಕೆ ಇಲಾಖೆಯಿಂದಲೇ ಐಸ್ ಪ್ಲಾಂಟ್‌ ತೆರೆಯಲಾಗುವುದು. ಮೀನುಗಾರಿಕೆ ಟೆಂಡರ್‌ ಅನ್ನು ಆನ್‌ಲೈನ್‌ನಲ್ಲಿ ಕರೆಯಲಾಗುತ್ತಿದೆ. ಇದರಿಂದ ಸ್ಥಳೀಯ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಮೀನುಗಾರರು ಅಹವಾಲು ಸಲ್ಲಿಸಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ