ಬೆಂಗಳೂರು : ಠಾಣೆಗಳಲ್ಲಿ ಶ್ರೀಮಂತ ಹಾಗೂ ಬಡವ ಎಂದು ತಾರತ್ಯಮವಿಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ನ್ಯಾಯ ಸಿಗುವಂತೆ ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ನಗರದ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಮೈದಾನದಲ್ಲಿ ರಾಜ್ಯ ಪೊಲೀಸ್ ಇಲಾಖೆ ಬುಧವಾರ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕಾಗಿ ಹುತ್ಮಾತರಾದ ಪೊಲೀಸರ ಕುಟುಂಬದವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ ಪೊಲೀಸರಿಗೆ ದೇಶದಲ್ಲೇ ಉತ್ತಮ ಹೆಸರಿದೆ. ನಾನು ಪೊಲೀಸರನ್ನು ಕೃಷ್ಣ ಪರಮಾತ್ಮನ ವಂಶಕ್ಕೆ ಸೇರಿದವರು ಎನ್ನುತ್ತೇನೆ. ಸಮಾಜದಲ್ಲಿ ಅಶಾಂತಿ ನೆಲೆಸಿದಾಗ ಶಿಷ್ಟರ ರಕ್ಷಣೆಗೆ ಕೃಷ್ಣನಂತೆ ಪೊಲೀಸರಿರುತ್ತಾರೆ ಎಂದು ಬಣ್ಣಿಸಿದರು.
ಪೊಲೀಸ್ ಇಲಾಖೆಯಲ್ಲಿ 7900ಕ್ಕೂ ಅಧಿಕ ಹುದ್ದೆಗಳನ್ನ ಭರ್ತಿ ಮಾಡಲು ಕ್ರಮ ವಹಿಸಿದ್ದೇವೆ. ಪೊಲೀಸರ ವಸತಿ ಯೋಜನೆಗೆ ಸಹ ಅನುದಾನ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು. ಇದೇ ವೇಳೆ ಹುತ್ಮಾತ ಪೊಲೀಸ್ ಕುಟುಂಬದವರನ್ನು ಭೇಟಿಯಾಗಿ ಮುಖ್ಯಮಂತ್ರಿ ಶಿವಕುಮಾರ್ ಮಾತುಕತೆ ನಡೆಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು ಪೊಲೀಸ್ ಕಮೀಷನರೇಟ್ ವಿಭಜನೆಗೆ ಜನ ಸಂಖ್ಯೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ಹೇಳಿದರು. ಜನಸಂಖ್ಯೆ ಅನುಗುಣವಾಗಿ ಪೊಲೀಸ್ ವ್ಯವಸ್ಥೆ ಬದಲಾವಣೆಗೆ ಮುಂದಾಗಿದ್ದೇವೆ. ಕಮೀಷನರೇಟ್ ವಿಭಜನೆಗೆ ಪೊಲೀಸರಿಗೆ ಅಸಮಾಧಾನ ಮೂಡಿರುವುದು ಗೊತ್ತಿದೆ. ಆದರೆ ಸರ್ಕಾರ ತೀರ್ಮಾನ ಮಾಡಿದೆ. ಎಲ್ಲರಿಗೂ ಒಳಿತಾಗಲಿದೆ ಎಂದು ಅವರು ಆಶಿಸಿದರು.