ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕೆ.ಬೆಟ್ಟಹಳ್ಳಿಯ ಪ್ರಸಿದ್ಧ ಶ್ರೀಲಕ್ಷ್ಮಿದೇವಿಯ ಬಂಡಿ ಉತ್ಸವದ ಜಾತ್ರಾ ಮಹೋತ್ಸವ ಬುಧವಾರ ಸಾವಿರಾರು ಭಕ್ತ ಸಮೂಹದಲ್ಲಿ ವಿಜೃಂಭಣೆಯಿಂದ ನಡೆಯಿತು.ಪ್ರತಿ ವರ್ಷ ನಡೆಯುವ ಐತಿಹಾಸಿಕ ಶ್ರೀಲಕ್ಷ್ಮೀದೇವಿ ಬಂಡಿ ಉತ್ಸವದ ಜಾತ್ರಾ ಮಹೋತ್ಸವದಲ್ಲಿ ಹಾರೋಹಳ್ಳಿ-ಶಂಭೂವಿನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕರೆ ಗ್ರಾಮದ ಎತ್ತಿನ ಬಂಡಿಗಳ ಉತ್ಸವಗಳು ಪಾಲ್ಗೊಂಡು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಬಂಡಿ ಉತ್ಸವ ನಡೆಯುವ ವೇಳೆ ನೂರಾರು ಭಕ್ತರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.
ಬಂಡಿ ಉತ್ಸವಕ್ಕೆ ಬೆಟ್ಟಹಳ್ಳಿ ವ್ಯಾಪ್ತಿಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.ಮಂಗಳವಾರ ರಾತ್ರಿಯೇ ಹಣ್ಣಿನ ಹೆಡಿಗೆಗಳನ್ನು ಎತ್ತಿನ ಬಂಡಿ ಮೂಲಕ ಆಯಾ ಗ್ರಾಮಸ್ಥರು ಕೆ.ಬೆಟ್ಟಹಳ್ಳಿ ಶ್ರೀಲಕ್ಷ್ಮಿದೇವಿ ದೇವಸ್ಥಾನಕ್ಕೆ ತಂದು ಪದ್ಧತಿಯಂತೆ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.
ಭಕ್ತರು ಶ್ರೀಲಕ್ಷ್ಮಿದೇವಿ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಎತ್ತಿನ ಬಂಡಿಯಲ್ಲಿ ತರಲಾಗಿದ್ದ ಹೂ, ಹಣ್ಣುಗಳನ್ನು ದೇವಸ್ಥಾನಕ್ಕೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಬಾಯಿ ಬೀಗ ಹಾಕಿಸಿಕೊಂಡು ಮೂರು ಸುತ್ತುಸುತ್ತಿ ದೇವರ ಅರಿಕೆ ತೀರಿಸಿದರು.ಇದಕ್ಕೂ ಮೊದಲು ನಾಲ್ಕು ಗ್ರಾಮದ ದೇವರ ಪೂಜೆಗಳನ್ನು ಹೊತ್ತು ಲಕ್ಷ್ಮೀದೇವಿ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಯಿತು. ಭಕ್ತರು ಹಣ್ಣು ಜವನಗಳನ್ನು ದೇವರಿಗೆ ಸರ್ಮಪಿಸಿ ಹಣ್ಣು ಪೂಜೆ ಪುನಸ್ಕಾರ ಸಲ್ಲಿಸಿದರು. ಹೂ ಹೊಂಬಾಳೆಯಿಂದ ಸಿದ್ದಗೊಂಡಿದ್ದ ಐದು ಗ್ರಾಮಗಳ ಕನ್ನಂಕಾಡಿ ಹಾಗೂ ಪೂಜೆ ಕುಣಿತಗಳು ಮೆರವಣಿಗೆಯಲ್ಲಿ ಸಾಗಿದ್ದವು.
ಈರಮಕ್ಕಳು ಹಾಗೂ ದೇವರಗುಡ್ಡರುಗಳು ಚಕ್ರಬಳೆ ಬಡಿದು ಒಲಿದು ಬಾರೆ ಒಲಿದು ಬಾರೆ ತಾಯಿಲಕ್ಷ್ಮಿದೇವಿ ಒಲಿದು ಬಾರೆ......’ ಎಂದು ಹಾಡಿ ಓಲೈಸಿದರು. ಇದರೊಂದಿಗೆ ಗೊರವರ ಕುಣಿತ, ತಮಟೆಯ ಮೇಳಗಳು ಮೇಳೈಸಿದವು. ಹರಕೆ ಹೊತ್ತ ಹೆಣ್ಣುಮಕ್ಕಳು ಬಾಯಿಬೀಗ ಹಾಕಿಸಿಕೊಂಡು ದೇವಸ್ಥಾನದ ಸುತ್ತಸುತ್ತಿ ಭಕ್ತಿ ಪ್ರದರ್ಶಿಸಿದರು.ಪೂಜಾಕುಣಿತ, ಪೂಜಾ ವಿಧಾನಗಳು ಮುಗಿಯುತ್ತಿದ್ದಂತೆಯೇ ಜಾತ್ರೆಯ ಮುಖ್ಯಭಾಗವಾದಲ್ಲಿ ಎತ್ತಿನ ಬಂಡಿ ಉತ್ಸವವನ್ನು ದೇವರಗುಡ್ಡರು ಮುನ್ನಡೆಸಿದಾಗ ಯುವಕರು ಪಟಾಕಿ ಸಿಡಿಸಿ ಊಘೇ ಊಘೇ ಎಂದು ಕೂಗಿ ಪುಸಲಾಯಿಸಿದರು.
ಎತ್ತುಗಳನ್ನು ಬಂಡಿಯನ್ನು ಹೊತ್ತು ಲಕ್ಷ್ಮೀದೇವಿ ದೇವಸ್ಥಾನದ ಸುತ್ತ ಮೂರು ಸುತ್ತಿದವು. ಬಂಡಿ ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.