ವಿವಿಧ ಕಡೆ ಕಾಡಾನೆ ದಾಳಿ: ಹಾನಿ

KannadaprabhaNewsNetwork | Published : Mar 28, 2024 12:54 AM

ಸಾರಾಂಶ

ಬಂದಾರು ಗ್ರಾಮದ ಬೀಬಿ ಮಜಲು ಎಂಬಲ್ಲಿನ ರಾಮಣ್ಣ ಗೌಡರ ತೋಟಕ್ಕೆ ದಾಳಿ ಮಾಡಿ ಅಲ್ಲಿಯೂ ಕೃಷಿ ಬೆಳೆಗಳನ್ನು ಧ್ವಂಸಗೊಳಿಸಿದೆ.

ಉಪ್ಪಿನಂಗಡಿ : ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಿವಿಧ ಕಡೆಗಳಲ್ಲಿ ಕಾಡಾನೆಗಳು ಬುಧವಾರವೂ ಗೋಚರಿಸಿದ್ದು, ಬತ್ತದ ಕೃಷಿ ಹಾಗೂ ತೋಟದಲ್ಲಿ ಬೆಳೆದು ನಿಂತ ಬೆಳೆಗಳನ್ನು ಹಾನಿಗೊಳಿಸಿದ ಬಗ್ಗೆ ವರದಿಯಾಗಿದೆ. ಬಂದಾರು ಗ್ರಾಮದ ನೆಲ್ಲಿಗೇರಿ ಮೋನಪ್ಪ ಗೌಡರ ಗದ್ದೆಗೆ ನುಗ್ಗಿದ ಆನೆಯಿಂದಾಗಿ ಬತ್ತದ ಕೃಷಿ ನಾಶವಾಗಿದೆ. ಬೆಳೆದು ನಿಂತ ಬತ್ತದ ಪೈರು ಆನೆ ತುಳಿತಕ್ಕೆ ಸಿಲುಕಿ ಹಾನಿಗೀಡಾಗಿದೆ. ಚಂದ್ರಶೇಖರ್ ಎಂಬವರ ತೋಟಕ್ಕೆನುಗ್ಗಿದ ಆನೆಯು ಅಲ್ಲಿನ ಬಾಳೆ ಗಿಡಗಳನ್ನು ಛಿದ್ರಗೊಳಿಸಿದೆ. ಹಾಗೂ ಬಂದಾರು ಗ್ರಾಮದ ಬೀಬಿ ಮಜಲು ಎಂಬಲ್ಲಿನ ರಾಮಣ್ಣ ಗೌಡರ ತೋಟಕ್ಕೆ ದಾಳಿ ಮಾಡಿ ಅಲ್ಲಿಯೂ ಕೃಷಿ ಬೆಳೆಗಳನ್ನು ಧ್ವಂಸಗೊಳಿಸಿದೆ. ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಝೆರಾಲ್ಡ್ ಡಿಸೋಜಾ , ಅರಣ್ಯ ಗಸ್ತು ಪಾಲಕ ಜಗದೀಶ್ , ಅರಣ್ಯ ವೀಕ್ಷಕ ಸೇಸಪ್ಪ , ವಾಹನ ಚಾಲಕ ಕಿಶೋರ್ ಭೇಟಿ ನೀಡಿದ್ದು, ಆನೆ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

-------------------

ಸಿದ್ದವನ ರಸ್ತೆ ಬದಿಯಲ್ಲಿ ಒಣ ಮರ ಧರಾಶಾಯಿ

ಬೆಳ್ತಂಗಡಿ: ಉಜಿರೆ ಧರ್ಮಸ್ಥಳ ರಸ್ತೆಯ ಸಿದ್ದವನ ಬಳಿ ರಸ್ತೆ ಬದಿಯ ಒಣಗಿದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲವು ತಾಸು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ ಸ್ಥಳೀಯರ ಸಹಕಾರದಲ್ಲಿ ಮರ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಕಳೆದ ಕೆಲವು ದಿನಗಳಿಂದ ಮರ ಒಣಗಿದ್ದು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸುವುದಕ್ಕೆ ಮುಂದಾಗದಿರುವುದು ಸಾರ್ವಜನಿಕರಿಗೆ ಬೇಸರವನ್ನುಂಟು ಮಾಡಿದೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರೂ ವಾಹನಗಳು ಸಂಚರಿಸುತ್ತಿರುತ್ತವೆ. ಒಂದು ವೇಳೆ ಏನಾದರೂ ಅಪಾಯ ಸಂಭವಿಸುತಿದ್ದಲ್ಲಿ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ರಸ್ತೆ ಬದಿಯ ಮರ ಉರುಳಿ ಬಿದ್ದು ಕಾರಿನಲ್ಲಿ ಸಂಚರಿಸುತಿದ್ದ ವ್ಯಕ್ತಿ ಮೃತಪಟ್ಟಿದ್ದ ಘಟನೆ ಇಲ್ಲಿ ಸಂಭವಿಸಿತ್ತು.

Share this article