ಅಭಿವೃದ್ಧಿಯಲ್ಲಿ ಶೃಂಗೇರಿ ಶಾಸಕರು ವಿಫಲ: ಸುಧಾಕರ್ ಶೆಟ್ಟಿ

KannadaprabhaNewsNetwork | Published : Oct 31, 2024 12:45 AM

ಸಾರಾಂಶ

ಕೊಪ್ಪ, ಸಣ್ಣ ಒತ್ತುವರಿ ಬಿಡಿಸಲು ಅರಣ್ಯ ಇಲಾಖೆಯಿಂದ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ರೈತರ ಹಿತ ಕಾಪಾಡುವಲ್ಲಿ ಶಾಸಕ ರಾಜೇಗೌಡರು ವಿಫಲರಾಗುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.

ಸಣ್ಣ ಒತ್ತುವರಿ ಬಿಡಿಸಲು ಅರಣ್ಯ ಇಲಾಖೆಯಿಂದ ರೈತರ ಮೇಲೆ ದಬ್ಬಾಳಿಕೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಣ್ಣ ಒತ್ತುವರಿ ಬಿಡಿಸಲು ಅರಣ್ಯ ಇಲಾಖೆಯಿಂದ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ರೈತರ ಹಿತ ಕಾಪಾಡುವಲ್ಲಿ ಶಾಸಕ ರಾಜೇಗೌಡರು ವಿಫಲರಾಗುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.ಬಾಳಗಡಿಯ ತಮ್ಮ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಾರ್ವಜನಿಕ ಸಭೆಯಲ್ಲಿ ನೀಡಿದ ವಾಗ್ದಾನವನ್ನು ಈಡೇರಿಸುವ ಜವಾಬ್ದಾರಿ ಜನಪ್ರತಿನಿಧಿಗಳಿಗಿರಬೇಕು. ಈ ಹಿಂದೆ ಕೊಪ್ಪದಲ್ಲಿ ರೈತ ಹಿತ ಸಮಿತಿಯಿಂದ ನಡೆದ ಒತ್ತುವರಿ ತೆರವು ಸಭೆಯಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಒತ್ತುವರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ಶಾಸಕ ಟಿ.ಡಿ. ರಾಜೇಗೌಡರು ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಬಳಿ ರೈತರ ಮತ್ತು ಸರ್ವ ಪಕ್ಷಗಳ ನಿಯೋಗ ಕರೆದೊಯ್ಯುತ್ತೇನೆ ಎಂದು ಭರವಸೆ ನೀಡಿದ್ದರು.

ಸಭೆ ನಡೆದು ೪ ತಿಂಗಳು ಕಳೆದರೂ ಶಾಸಕರು ಅದನ್ನು ಮರೆತುಬಿಟ್ಟಿದ್ದಾರೆ. ರೈತರ ಹಿತ ಕಾಪಾಡುವಲ್ಲಿ ರಾಜಿ ಸೂತ್ರ ಬೇಡ. ತಮ್ಮ ಮಾತಿನಂತೆ ನಿಯೋಗ ಕರೆದೊಯ್ಯಲು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಾವೇ ನಿಯೋಗವನ್ನು ಕರೆದೊಯ್ಯುತ್ತೇವೆ ಎಂದ ಅವರು ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮುಖ್ಯರಸ್ತೆಗಳೂ ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೆಗ್ಗಾರುಕೊಡಿಗೆ, ಜಕ್ಕನಕ್ಕಿ, ಕಟ್ಟಿನಮನೆ ರಸ್ತೆ, ನಾರ್ವೆ ಘಾಟಿ, ಕುಸಿದಿದ್ದು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸೋಲಾರ್ ರೂಫ್ ಟಾಪ್ ಯೋಜನೆಯನ್ನು ಕೇಂದ್ರಸರ್ಕಾರ ಬಡವರಿಗಾಗಿ ರೂಪಿಸಿದೆ. ಕಾರ್ಪೊರೇಟರ್ ಕಂಪನಿಗಳಿಗಿಂತ ಬಡವರ ಹಿತ ಕಾಯುವುದೇ ಈ ಯೋಜನೆ ಮುಖ್ಯ ಉದ್ದೇಶ. ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿರುವ ಶಾಸಕರು ತಾವು ಪ್ರತಿನಿಧಿಸುವ ಕ್ಷೇತ್ರದ ಒಂದೇ ಒಂದು ಮನೆಗೂ ಸೋಲಾರ್ ರೂಫ್‌ಟಾಪ್ ಹಾಕಿಸಿಲ್ಲ ಎಂದು ಆರೋಪಿಸಿದರು. ಜೆಡಿಎಸ್ ಕ್ಷೇತ್ರಾಧ್ಯಕ್ಷ ಬಿ.ಎಚ್. ದಿವಾಕರ್ ಭಟ್ ಭಂಡಿಗಡಿ, ಕೊಪ್ಪ ತಾಲೂಕು ಅಧ್ಯಕ್ಷ ಎ.ಎನ್. ರಾಮಸ್ವಾಮಿ ಕಗ್ಗ, ಕೊಪ್ಪ ನಗರ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಕರ್ಡೋಜ, ಅನಿಲ್ ನಾರ್ವೆ, ವಾಸುದೇವ, ಕೆಳಹೆದ್ದಾರಿ ಭಾಸ್ಕರ್, ರಮೇಶ್ ಸೇರಿದಂತೆ ಇತರರು ಸುದ್ಧಿಗೋಷ್ಠಿಯಲ್ಲಿದ್ದರು.

Share this article