ಹೊಸಪೇಟೆ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ವಿಚಾರದಲ್ಲಿ ಬಹಳ ದೊಡ್ಡಮಟ್ಟದ ಅಪರಾಧ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಬಿಜೆಪಿಯವರು ಮಾಜಿ ಶಾಸಕರನ್ನು ಹಾಗೂ ಕೆಲವು ಅಧಿಕಾರಿಗಳನ್ನು ಉಪಯೋಗಿಸಿಕೊಂಡು ನಮ್ಮ ಅಭ್ಯರ್ಥಿಗೆ ಬಂದಂತಹ ಮತಗಳ ಮೇಲೆ ತಿರುಗಾ ಬಂಡಲ್ ತೆಗೆದುಕೊಂಡು ಬೇರೆ ಪೆನ್ನಿನಿಂದ ಮಾರ್ಕ್ ಮಾಡಿ 200ಕ್ಕೂ ಹೆಚ್ಚು ಮತಗಳನ್ನು ತಿದ್ದಿದ್ದಾರೆ. ಇದು ಇಡೀ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ದೊಡ್ಡ ಕಳಂಕವಾಗಿದೆ. ಇದರ ಬಗ್ಗೆ ದೊಡ್ಡ ತನಿಖೆ ನಡೆಯಬೇಕಾಗಿದೆ. ಇದನ್ನು ನಾವು ಕಾನೂನು ಚೌಕಟ್ಟಿನಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದರು.
ಅಂಚೆ ಮತಗಳ ಎಣಿಕೆಯ ಆನಂತರ ಅವರ ಏಜೆಂಟ್, ನಮ್ಮ ಏಜೆಂಟ್‌ಗಳು ಸೇರಿದಂತೆ ಅಧಿಕಾರಿಗಳು ಸಹಿ ಮಾಡಿದ್ದಾರೆ. ಈ ರೀತಿ ನಡೆದಿರುವುದು ಇಡೀ ದೇಶಕ್ಕೆ ದೊಡ್ಡ ಕಳಂಕವಾಗಿದೆ. ಚುನಾವಣೆಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಒಂದು ದೊಡ್ಡ ಕಳಂಕ. ಇದರಿಂದ ಎಲ್ಲ ರಾಜಕೀಯ ಪಕ್ಷಗಳು ಇದರಿಂದ ಬಹಳ ಹುಷಾರಾಗಿರಬೇಕು. ಈ ರೀತಿ ಒಳಗಡೆ ಸಂಚು ಮಾಡಿ ನಮ್ಮ ಶಾಸಕರಿಗೆ ಬಂದಂತಹ ಮತಗಳ ಮೇಲೆ ಇನ್ನೊಂದು ಮಾರ್ಕ್ ಮಾಡಿ ಇನ್‌ವ್ಯಾಲಿಡ್ ಮಾಡಬೇಕು ಎಂದು ಒಂದು ದೊಡ್ಡ ಕುತಂತ್ರ ಮಾಡಿದ್ದಾರೆ ಎಂದರು.ಈ ಹಿಂದೆ ಜಯನಗರ ಕ್ಷೇತ್ರದಲ್ಲೂ ಇಂತಹದೇ ಘಟನೆ ನಡೆದಿದೆ. ಅಧಿಕಾರ ಉಪಯೋಗಿಸಿಕೊಂಡು ಇಲ್ಲಿಯೂ ಅವರ ಅಧಿಕಾರ ಚಲಾಯಿಸಿದ್ದಾರೆ. ನಾವು ನ್ಯಾಯಾಲಯ ಮೂಲಕ ಹೋರಾಟ ನಡೆಸುತ್ತೇವೆ ಎಂದರು.