ಮೇ 15ರೊಳಗೆ ನವೀಕರಣಗೊಂಡ ತುಂಗಭದ್ರಾ ಜಲಾಶಯ ಉದ್ಘಾಟನೆ: ಡಿ.ಕೆ. ಶಿವಕುಮಾರ್‌

KannadaprabhaNewsNetwork |  
Published : May 04, 2026, 02:30 AM IST
DK Shivakumar

ಸಾರಾಂಶ

ತುಂಗಭದ್ರಾ ಜಲಾಶಯದ ಎಲ್ಲ 33 ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯಪೂರ್ಣಗೊಂಡಿದೆ. ಮೇ 15ರೊಳಗೆ ನವೀಕರಣಗೊಂಡ ತುಂಗಭದ್ರಾ ಜಲಾಶಯ ಉದ್ಘಾಟಿಸಲು ಸಾಧ್ಯವೇ ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ, ಜನಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯಪೂರ್ಣಗೊಂಡಿದೆ. ಮೇ 15ರೊಳಗೆ ನವೀಕರಣಗೊಂಡ ತುಂಗಭದ್ರಾ ಜಲಾಶಯ ಉದ್ಘಾಟಿಸಲು ಸಾಧ್ಯವೇ ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ, ಜನಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ

ಸಮೀಪದ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಕ್ರಸ್ಟ್‌ಗೇಟ್ ಕಾರ್ಯ ಪರಿಶೀಲನೆಯ ಆನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಲಾಶಯ ಈ ಭಾಗದ ಎರಡೂವರೆ ಲಕ್ಷ ರೈತರ ಬದುಕಿನ ಜೀವನಾಡಿಯಾಗಿದೆ. ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್‌ ತುಂಡರಿಸಿಕೊಂಡು 2024ರ ಆಗಸ್ಟ್ 10ರಂದು ರಾತ್ರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಕೆಲವೇ ದಿನಗಳಲ್ಲಿ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಅಲ್ಲ, ಎಲ್ಲ 33 ಹೊಸ ಕ್ರಸ್ಟ್‌ ಗೇಟ್‌ಗಳ ಅಳವಡಿಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ವಿರೋಧ ಪಕ್ಷದವವರ ಟೀಕೆಗೆ ಸರಿಯಾದ ಉತ್ತರ ನೀಡಿದ್ದೇವೆ. ತಾಂತ್ರಿಕ ತಂಡ ಕೈಗೊಳ್ಳಲಾದ ತುರ್ತು ದುರಸ್ತಿ ಕಾರ್ಯಗಳು ಈಗ ಅಂತಿಮ ಹಂತಕ್ಕೆ ತಲುಪಿವೆ ಎಂದು ಹೇಳಿದರು.

ಸರ್ಕಾರವು ತಕ್ಷಣವೇ ಸ್ಪಂದಿಸಿತ್ತು

ಜಲಾಶಯದ 19ನೇ ಗೇಟ್ ಅನಾಹುತಕ್ಕೀಡಾದಾಗ ಸರ್ಕಾರವು ತಕ್ಷಣವೇ ಸ್ಪಂದಿಸಿತ್ತು. ಅಂದು ರಾತ್ರಿಯೇ ಅಧಿಕಾರಿಗಳು ಹಾಗೂ ಸಚಿವರು ಸ್ಥಳಕ್ಕೆ ಧಾವಿಸಿ ತುರ್ತು ಕ್ರಮಗಳನ್ನು ಕೈಗೊಂಡಿದ್ದರು. ಪ್ರಸ್ತುತ ಜಲಾಶಯದ ಎಲ್ಲ 33 ಹೊಸ ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಮುಗಿದಿದ್ದು, ತಾಂತ್ರಿಕ ತಂಡದ ಸಲಹೆಯಂತೆ ಆಧುನೀಕರಣ ಪ್ರಕ್ರಿಯೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಮೊದಲ ಸೆಟ್ ಹೊಸ ಚೈನ್‌ಗಳು ಮೇ 7ರಂದು ಆಗಮಿಸಲಿದ್ದು, ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ. ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಮೇ 15ರಂದು ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅತ್ಯಂತ ಕಡಿಮೆ ಸಮಯದಲ್ಲಿ ಹಗಲು, ರಾತ್ರಿ ಕೆಲಸಗಾರರು, ತಜ್ಞರು ಶ್ರಮ ವಹಿಸಿ 33 ಗೇಟ್‌ಗಳನ್ನು ದುರಸ್ತಿಗೊಳಿಸಿದೆ. ಇಡೀ ದೇಶಕ್ಕೆ ಒಂದು ದೊಡ್ಡ ಸವಾಲು, ಮಾದರಿಯಾಗಿದೆ. ಕೇವಲ ಗೇಟ್‌ಗಳ ದುರಸ್ತಿಗೆ ಸುಮಾರು ₹54 ಕೋಟಿ ವೆಚ್ಚ ಮಾಡಲಾಗಿದೆ. ಕಾಲುವೆಗಳ ದುರಸ್ತಿ ಮತ್ತು ಇತರ ಕೆಳಹಂತದ ಕಾಮಗಾರಿಗಳಿಗೆ ₹315 ಕೋಟಿ ವ್ಯಯಿಸಲಾಗಿದೆ. ತಜ್ಞರ ವರದಿಯಂತೆ ಈ ದುರಸ್ತಿ ಕಾರ್ಯದಿಂದಾಗಿ ಜಲಾಶಯದ ಆಯಸ್ಸು ಮುಂದಿನ 50-60 ವರ್ಷಗಳವರೆಗೆ ವೃದ್ಧಿಸಲಿದೆ ಎಂದರು.

ಜಲಾಶಯದ ಹೂಳು ತೆಗೆಯುವಾಗ ರೈತರ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಜಾಗರೂಕತೆ ವಹಿಸಲಾಗುವುದು. ತುಂಗಭದ್ರಾ ಅಣೆಕಟ್ಟಿನ ಸುತ್ತಮುತ್ತಲ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರು ಅಣೆಕಟ್ಟನ್ನು ಸೇರುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿ ಮುಖ್ಯವಾದರೂ ಜನರ ಆರೋಗ್ಯ ಮತ್ತು ಬೆಳೆಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಸಚಿವರಾದ ಶಿವರಾಜ ಎಸ್. ತಂಗಡಗಿ, ಈಶ್ವರ ಬಿ. ಖಂಡ್ರೆ, ಕೆ.ಎಚ್. ಮುನಿಯಪ್ಪ, ಸಂಸದರಾದ ಈ.ತುಕಾರಾಂ, ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಶಾಸಕರಾದ ಎಚ್‌.ಆರ್‌. ಗವಿಯಪ್ಪ, ಡಾ.ಎನ್.ಟಿ. ಶ್ರೀನಿವಾಸ ಹಾಗೂ ಅಮರೇಗೌಡ ಪಾಟೀಲ ಬಯ್ಯಾಪುರ, ಜಿಲ್ಲಾಧಿಕಾರಿಗಳಾದ ಕವಿತಾ ಎಸ್‌. ಮನ್ನಿಕೇರಿ, ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒಗಳಾದ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ವರ್ಣಿತ್ ನೇಗಿ, ಎಸ್ಪಿಗಳಾದ ಎಸ್. ಜಾಹ್ನವಿ, ಡಾ. ರಾಮ್ ಎಲ್. ಅರಸಿದ್ದಿ, ಎಎಸ್‌ಪಿಗಳಾದ ಮಂಜುನಾಥ, ಆರ್.‌ ಹೇಮಂತಕುಮಾರ್, ಟಿಬಿ ಬೋರ್ಡ್ ಕಾರ್ಯದರ್ಶಿಗಳಾದ ಒ.ಆರ್.ಕೆ. ರೆಡ್ಡಿ, ಮುಖ್ಯ ಎಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಸ್.ಇ. ನಾರಾಯಣ ನಾಯ್ಕ, ಮುಖಂಡರಾದ ಪಿ. ಗಾದಿಲಿಂಗಪ್ಪ, ಆಂಜನೇಯಲು, ಎಚ್‌.ಎನ್‌.ಎಫ್‌. ಇಮಾಮ್‌ ನಿಯಾಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14
13 ಮಂದಿ ಐಎಎಸ್‌ ಅಧಿಕಾರಿಗಳ ವರ್ಗ, ಕೆಲವರಿಗೆ ಹೆಚ್ಚುವರಿ ಹೊಣೆ