ಜಗದ್ಗುರುಗಳ ದರ್ಬಾರ್ । ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ। ವೈಷ್ಣವಿಯಲಂಕಾರದಲ್ಲಿ ಕಂಗೊಳಿಸಿದ ಅಧಿದೇವತೆ ಶಾರದೆ
ಕನ್ನಡಪ್ರಭ ವಾರ್ತೆ, ಶೃಂಗೇರಿಶೃಂಗೇರಿ ದಸರೆ ದಿನೇ ದಿನೇ ಮೆರಗು ಪಡೆದು ಕಳೆಗಟ್ಟುತ್ತಿದೆ. ಶಾರದೆಯ ದಿನಕ್ಕೊಂದು ಅಲಂಕಾರ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜಬೀದಿ ಉತ್ಸವ, ಜಗದ್ಗುರುಗಳ ನವರಾತ್ರಿ ದರ್ಬಾರ್ ಎಲ್ಲವೂ ಜನಾಕರ್ಷಣೀಯವಾಗಿದೆ.
ಶ್ರೀ ಮಠದ ಮುಂಬಾಗದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಸಾಲು ಅಂಗಡಿ ಮುಂಗಟ್ಟುಗಳು, ಗಾಂಧೀ ಮೈದಾನದ ಸರ್ಕಸ್ ಗಳು, ಎಲ್ಲವೂ ಮೆರಗು ನೀಡುತ್ತಿದೆ. ಶ್ರೀ ಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ, ಬೋಜನ ಶಾಲೆ, ನರಸಿಂಹವನ, ಶೃಂಗೇರಿ ಪಟ್ಟಣ, ಗಾಂಧಿ ಮೈದಾನ ಎಲ್ಲೆಲ್ಲೂ ಜನಜಂಗುಳಿ. ಗುಡುಗು ಸಿಡಿಲು ಮಳೆಯ ಆರ್ಭಟದ ನಡುವೆಯೂ ದೇಶದ ವಿವಿಧೆಡೆಗಳಿಂದ ಜನಸಾಗರವೇ ಹರಿದು ಬರುತ್ತಿದೆ.ಶೃಂಗೇರಿ ದಸರೆ ದರ್ಬಾರ್ ಗೂ ಮೈಸೂರು ದರ್ಬಾರಿಗೂ ಸಾಮ್ಯತೆ ಇದೆ. ವಿಜಯನಗರ ಕಾಲದಲ್ಲಿ ಆಚರಣೆಯಲ್ಲಿದ್ದ ಸಂಪ್ರದಾಯಗಳು ಶೃಂಗೇರಿ ಪೀಠದಲ್ಲಿ ಇಂದಿಗೂ ಮುಂದುವರಿಯುತ್ತಿದ್ದು, ಅದನ್ನೇ ಮೈಸೂರು ಅರಸರು ಅನುಸರಿಸಿಕೊಂಡು ಹೋಗುತ್ತಿದ್ದಾರೆ ಎನ್ನಬಹುದು. 1885 ರಲ್ಲಿ ಮೈಸೂರು ಅರಸ ಜಯಚಾಮರಾಜೇಂದ್ರ ಒಡೆಯರ್ ಶೃಂಗೇರಿಗೆ ಭೇಟಿ ನೀಡಿದಾಗ, ಜಗದ್ಗುರು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗೆ ಶಾರದಾಂಬೆ ಸನ್ನಿಧಿ ರತ್ನ ಖಚಿತ ಕಿರೀಟ ನೀಡಿ ಅನುಗ್ರಹಿಸಿದ್ದರು. ಮೈಸೂರು ಅರಸರ ಖಾಸಾ ದರ್ಬಾರ್ ನಲ್ಲಿ ಈ ಕಿರೀಟವನ್ನು ಇಂದಿಗೂ ಸಿಂಹಾಸನದ ಪಕ್ಕದಲ್ಲಿಟ್ಟು ರಾಜವಂಶಸ್ಥರು ಪೂಜೆ ಸಲ್ಲಿಸುವುದನ್ನು ಕಾಣಬಹುದಾಗಿದೆ.
ಶೃಂಗೇರಿ ಶಾರದೆಗೆ ಸೋಮವಾರ ವೈಷ್ಣವಿಯಲಂಕಾರ ಮಾಡಲಾಗಿತ್ತು. ಶಾರದೆ ಕೈಯಲ್ಲಿ ಶಂಖ, ಚಕ್ರ, ಗದೆ, ಮೊದಲಾದ ಆಯುಧಗಳನ್ನು ಧರಿಸಿ ಗರುಡವಾನಳಾಗಿ ವೈಷ್ಣವಿಯಾಗಿ ಶ್ರೀ ಮಹಾ ವಿಷ್ಣುವಿನ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸುತ್ತಿರುವ ಅಲಂಕಾರ ನಯನ ಮನೋಹರವಾಗಿತ್ತು. ಶತಚಂಡೀಕಾಯಾಗದ ಸಂಕಲ್ಪ, ಪುರಶ್ಚರಣಾಂಭ ನೆರವೇರಿತು. ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಶ್ರೀ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ ನೆರವೇರಿತು.ಶ್ರೀ ಮಠದಲ್ಲಿ ಶ್ರೀ ಸೂಕ್ತಜಪ, ಭುವನೇಶ್ವರಿ ಜಪ, ಜಗನ್ಮಾತೆ ಆವಾಸ ಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ನವಾವರಣ ಪೂಜೆ ನೆರವೇರಿತು. ಶ್ರೀಮಠದ ಆವರಣದ ಎಲ್ಲಾ ದೇವಾಲಯಗಳಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ಮಂಗಳವಾರ ಶಾರದೆಗೆ ಮೋಹಿನಿ ಅಲಂಕಾರ ನಡೆಯಲಿದ್ದು, ಅಂದು ಶಾರದೆಗೆ ಸಕಲ ಆಭರಣಗಳನ್ನು ತೊಡಿಸಿ ವಿಶೇಷ ಅಲಂಕಾರ ಮಾಡಲಾಗುವುದು. ಶ್ರೀ ಮಠದ ಖಜಾನೆಯಲ್ಲಿರುವ ಎಲ್ಲಾ ಆಭರಣಗಳು, ದೇಶ ವಿದೇಶಗಳ ರಾಜಮಹಾರಾಜರು ನೀಡಿದ ಸಕಲ ಆಭರಣಗಳನ್ನು ತೊಡಿಸಿ ಅಲಂಕರಿಸ ಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶಂಕರನ್ ನಂಬೂದರಿ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಬೀದಿ ಉತ್ಸವದಲ್ಲಿ ದರೆಕೊಪ್ಪ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.
7 ಶ್ರೀ ಚಿತ್ರ 1-ಶೃಂಗೇರಿ ಶಾರದೆಗೆ ಸೋಮವಾರ ವೈಷ್ಣವಿಯಲಂಕಾರ ಮಾಡಲಾಗಿತ್ತು.7 ಶ್ರೀ ಚಿತ್ರ 2- ಶೃಂಗೇರಿಯಲ್ಲಿ ಕಳೆಗಟ್ಟಿದ ರಾಜಬೀದಿ ಉತ್ಸವ
7 ಶ್ರೀ ಚಿತ್ರ3-ಶೃಂಗೇರಿ ನವರಾತ್ರಿಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ದರ್ಬಾರ್ ನಡೆಸುತ್ತಿರುವುದು.