ಅಪಾಯದಂಚಿನಲ್ಲಿದೆ ಶೃಂಗೇರಿಯ ಮೆಣಸೆ ಸೇತುವೆ

KannadaprabhaNewsNetwork |  
Published : Jun 14, 2025, 03:00 AM IST
ೇ್ | Kannada Prabha

ಸಾರಾಂಶ

ಶೃಂಗೇರಿ ಸುಣ್ಣಬಣ್ಣ ವಿರಲಿ, ದುರಸ್ತಿಯನ್ನು ಕಾಣದೇ ದಶಕಗಳೇ ಕಳೆದ ಈ ಸೇತುವೆ ಮೇಲೆಯೇ ಹೊಂಡಗುಂಡಿಗಳ ಲೆಕ್ಕವಿಲ್ಲ.ಆಗಾಗ ಅಪಘಾತಗಳು ಸಂಭವಿಸುತ್ತಾ ಅಪಘಾತ ವಲಯವಾಗಿ ಪರಿಣಮಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ಜನಪ್ರತಿನಿದಿಗಳು, ಸರ್ಕಾರದ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

- ದಶಕಗಳು ಕಳೆದರೂ ದುರಸ್ಥಿ ಕಾಣದೆ ನಿತ್ಯಸಂಚಾರಿಗಳ ಪಾಲಿಗೆ ಮೃತ್ಯುಕೂಪವಾಗುತ್ತಿದ್ದರೂ ನಿರ್ಲಕ್ಷ್ಯ

ನೆಮ್ಮಾರ್ ಅಬೂಬಕರ್.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸುಣ್ಣಬಣ್ಣ ವಿರಲಿ, ದುರಸ್ತಿಯನ್ನು ಕಾಣದೇ ದಶಕಗಳೇ ಕಳೆದ ಈ ಸೇತುವೆ ಮೇಲೆಯೇ ಹೊಂಡಗುಂಡಿಗಳ ಲೆಕ್ಕವಿಲ್ಲ.ಆಗಾಗ ಅಪಘಾತಗಳು ಸಂಭವಿಸುತ್ತಾ ಅಪಘಾತ ವಲಯವಾಗಿ ಪರಿಣಮಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ, ಜನಪ್ರತಿನಿದಿಗಳು, ಸರ್ಕಾರದ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸೇತುವೆ ಕೈಪಿಡಿಗಳಿಗೆ ಬಳ್ಳಿ ಗಿಡಗಳು ಹಬ್ಬಿದ್ದರೂ ಅದರ ನಿರ್ವಹಣೆ ಕೊರತೆಯಿಂದ ಶೀಥಿಲಾವಸ್ಥೆಗೆ ತಲುಪುತ್ತಿವೆ. ಸೇತುವೆಯ ಕೈಪಿಡಿಗಳು ಜಖಂಗೊಂಡು ತುಂಡಾಗಿ ತುಂಗೆಯಲ್ಲಿ ಬೀಳುತ್ತಾ ದಿನೇ ದಿನೇ ಇನ್ನಷ್ಟು ಶಿಥಿಲಗೊಳ್ಳುತ್ತಾ ಅಪಾಯದಂಚಿಗೆ ತಲುಪಿ ನಿತ್ಯ ಸಂಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಕಾಲುಸಂಕ, ತೂಗು ಸೇತುವೆ ಗೆ ಮಾತ್ರ ಈ ದುರವಸ್ಥೆ ಎನ್ನುವಂತಿಲ್ಲ. ಬದಲಿಗೆ ಶೃಂಗೇರಿ - ಚಿಕ್ಕಮಗಳೂರು - ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಮೆಣಸೆ ಸೇತುವೆಯ ದುಸ್ಥಿತಿಯೂ ಇದೇ ಆದರೂ ಇದನ್ನು ಸರಿಪಡಿಸಲು ಸಂಬಂರ್ ಪಟ್ಟವರು ಮುಂದಾಗದಿ ರುವುದು ವಿಪರ್ಯಾಸವೇ ಸರಿ.

ದಶಕಗಳು ಕಳೆದರೂ ಈ ಸೇತುವೆಗೆ ಮಾತ್ರ ದುರಸ್ಥಿ ಭಾಗ್ಯ ಕೂಡಿ ಬಂದಿಲ್ಲ.ಶೃಂಗೇರಿಯಿಂದ ಜಯಪುರ, ಬಾಳೆಹೊನ್ನೂರು, ಳಸ, ಹೊರನಾಡು, ಮೂಡಿಗೆರೆ, ಚಿಕ್ಕಮಗಳೂರು, ಬೇಲೂರು, ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ನಗರ, ಮಹಾನಗರ, ಗ್ರಾಮೀಣ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿರುವ ಕೇಂದ್ರ ಬಿಂದು ಈ ಸೇತುವೆ.

1956 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಕಡಿದಾಳ್ ಮಂಜಪ್ಪನವರಿಂದ ಶಂಕುಸ್ಥಾಪನೆ ಗೊಂಡು ನಡೆದ ತ್ವರಿತ ಕಾಮಗಾರಿಯಿಂದ 1960ರಲ್ಲಿ ಲೋಕೋಪಯೋಗಿ ಸಚಿವ ಡೆಪ್ಯುಟಿ ಚೆನ್ನಬಸಪ್ಪನರಿಂದ ಉದ್ಘಾಟನೆ ಗೊಂಡಿತ್ತು. ಅಂದಿನಿಂದ ಈ ಸೇತುವೆ ಶೃಂಗೇರಿ ಶ್ರೀ ಶಾರದಾ ಪೀಠ ಹಾಗೂ ಪಟ್ಟಣಕ್ಕೆ ಬರುವ ಜನರು, ಪ್ರವಾಸಿಗರಿಗೆ ಆಧಾರವಾಯಿತು. ಪ್ರತಿನಿತ್ಯ ಸಾವಿರಾರು ವಾಹನಗಳು ಈ ಸೇತುವೆಯ ಮೇಲೆ ಸಂಚರಿಸುತ್ತವೆ.

65 ವರ್ಷಗಳ ಇತಿಹಾಸ ಹೊಂದಿದ ಈ ಸೇತುವೆ ಮೇಲೆ ಇತ್ತೀಚಿನ ದಿನಗಳಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಒತ್ತಡ ಹೆಚ್ಚಿ ಸೇತುವೆ ಶಿಥಿಲಗೊಳ್ಳುತ್ತಿದೆ. ಪಿಲ್ಲರ್ ಗಳು ದುರ್ಬಲಗೊಂಡಿವೆ. ಮರದ ಬೇರುಗಳು ಪಿಲ್ಲರ್‌ ಗಳನ್ನೆ ಆಧಾರವಾಗಿಸಿ ಬೆಳೆದಿರುವುದರಿಂದ ಅಲ್ಲಲ್ಲಿ ಬಿರುಕು ಬಿಟ್ಟಿವೆ. ಅಲ್ಲದೆ ಮಳೆಗಾಲದಲ್ಲಿ ತುಂಗಾ ನದಿ ಪ್ರವಾಹದಲ್ಲಿ ಬೃಹತ್ ಮರಗಳು ಬಂದು ಸೇತುವೆ ಪಿಲ್ಲರ್ ಗಳಿಗೆ ಅಪ್ಪಳಿಸುವುದರಿಂದ ದುರ್ಬಲಗೊಂಡಿವೆ.

ಸೇತುವೆ ತಳ ಭಾಗದಲ್ಲಿ ಗಿಡಮರಗಳು ಬೆಳೆದು ಸೇತುವೆಯ ಪಿಲ್ಲರ್ ಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಸೇತುವೆಯ ಕೈಪಿಡಿಗಳು ಅಲ್ಲಲ್ಲಿ ಜಖಂಗೊಂಡಿದ್ದು ಕೆಲವೆಡೆ ತುಂಡಾಗಿ ಬೀಳುವ ಹಂತದಲ್ಲಿದೆ. ಬಹಳಷ್ಟು ಮಾರ್ಗಗಳ ಸಂಪರ್ಕದ ಈ ಸೇತುವೆ ಗತಕಾಲದ ಇತಿಹಾಸದ ಕಥೆ ಹೇಳುತ್ತಿದ್ದರೂ ನಾಡನ್ನು ಆಳುವವರು, ಅಧಿಕಾರಿಗಳು ಓಡಾಡುತ್ತಿದ್ದರೂ ಯಾರ ಗಮನಕ್ಕೂ ಇದನ್ನು ಅಷ್ಟೆ ಜೋಪಾನವಾಗಿ ಸಂರಕ್ಷಿಸುವ ಕೆಲಸ ಮಾಡದಿರುವುದು ಆಶ್ಚರ್ಯವೇ ಸರಿ.

ಸೇತುವೆಯ ಬಳಿ ಬೀದಿ ದೀಪದ ವ್ಯವಸ್ಥೆಯಿಲ್ಲ. ಹೇಳಿಕೇಳಿ ಶೃಂಗೇರಿ ಒಂದು ಪ್ರವಾಸಿ ಕೇಂದ್ರ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುವ ಈ ಸ್ಥಳದಲ್ಲಿ ರಸ್ತೆ, ಸೇತುವೆ ಯಂತಹ ಮೂಲಭೂತ ಸೌಲಭ್ಯದ ಅವ್ಯವಸ್ಥೆ ಪ್ರವಾಸೋದ್ಯಮದ ಮೇಲೆ ಹೊಡೆತ ಬೀರುವ ಜತೆಗೆ ಧಾರ್ಮಿಕ ಶ್ರದ್ಧಾಕೇಂದ್ರವಾದ ಶೃಂಗೆರಿಗೆ ಬರುವ ಭಕ್ತರಿಗೂ ಇಂತಹ ಸಂಪರ್ಕ ವ್ಯವಸ್ಥೆಯ ಕೊರತೆ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಚಿಂತಿಸಿ ಮುಖ್ಯ ರಸ್ತೆಯ ಸೇತುವೆ ನಿರ್ವಹಣೆ, ದುರಸ್ಥಿಗೆ ಸರ್ಕಾರ ಇನ್ನಾದರೂ ಮುಂದಾಗಬೇಕಿದೆ.

ಶಿಥಿಲಗೊಂಡು ಕುಸಿಯುವ ಹಂತ ತಲುಪುತ್ತಿರುವ ಸೇತುವೆಗೆ ರಾಜ್ಯ ಹೆದ್ದಾರಿ ಪ್ರಾಧಿಕಾರ, ಸರ್ಕಾರ, ಸಂಬಂಧಪಟ್ಟ ಇಲಾಖೆಯವರು ಎಚ್ಚರ ವಹಿಸಿ ಹಂತಹಂತವಾಗಿ ಸೇತುವೆಗೆ ಕಾಯಕಲ್ಪ ಒದಗಿಸಬೇಕಿದೆ. ಸೇತುವೆ ಈಗಾಗಲೇ ಹಳೆಯ ದಾಗಿರುವುದರಿಂದ ಶೀಘ್ರವಾಗಿ ಸೇತುವ ನಿರ್ಮಾಣದ ಅಗತ್ಯವು ಅನಿವಾರ್ಯವಾಗಿದೆ. ಅಪಾಯ ಅರಿತು ಅನಾಹುತ ಸಂಭವಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳುವುದೇ ಉತ್ತಮ ಪರಿಹಾರ.

--ಬಾಕ್ಸ್--ಹೊಸ ಸೇತುವೆ ಮಂಜೂರು ಮಾಡಬೇಕು

ಈ ಸೇತುವೆ ತೀರ ಹಳೆಯದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಸೇತುವೆ ಮೇಲೆ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೇತುವೆ ಮೇಲೆ ಒತ್ತಡವೂ ಜಾಸ್ತಿಯಾಗುತ್ತಿದೆ. ಇಲ್ಲಿಗೆ ಹೊಸ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇಲ್ಲಿಗೆ ಹೊಸ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡಬೇಕಿದೆ. --ರಮೇಶ್ ಶೂನ್ಯ

ಅಧ್ಯಕ್ಷರು. ತಾಲೂಕು ಕಾರ್ಮಿಕ ಮಿತ್ರ ಬಳಗ.

-- ಬಾಕ್ಸ್--

ಅಗತ್ಯ ಕಾಯಕಲ್ಪ ಒದಗಿಸಲು ಮುಂದಾಗಬೇಕು........

ಈ ಸೇತುವೆ ರಾಜ್ಯ ಹೆದ್ದಾರಿಯಲ್ಲಿರುವುದರಿಂದ ಶೃಂಗೇರಿಯಿಂದ ರಾಜ್ಯದ ರಾಜದಾನಿ ಬೆಂಗಳೂರು ಸೇರಿದಂತೆ ಇತರೆ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಸಂಪರ್ಕ ಕಡಿತಗೊಳ್ಳುವ ಮೊದಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಶೃಂಗೇರಿ ಕಳಸ, ಬಾಳೆಹೊನ್ನೂರು, ಹೊರನಾಡು, ಧರ್ಮಸ್ಥಳ, ಮಂಗಳೂರು ಸುತ್ತಮುತ್ತಲ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವಾಗಿದೆ. ತುರ್ತಾಗಿ ಈ ಸೇತುವೆಗೆ ಕಾಯಕಲ್ಪ ಒದಗಿಸಲು ಮುಂದಾಗಬೇಕಿದೆ.

.- ಕೆ.ಎಂ.ರಾಮಣ್ಣ ಕರುವಾನೆ, ಸದಸ್ಯ

ದಸಸಂ ಜಿಲ್ಲಾ ಸಮಿತಿ

-

13 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆ ಸೇತುವೆ ಶಿಥಿಲಗೊಂಡು ಅಪಾಯದಂಚಿದಲ್ಲಿರುವುದು.

13 ಶ್ರೀ ಚಿತ್ರ 2-

ಸೇತುವೆ ಕೈಪಿಡಿಗಳಿಗೆ ಗಿಡ,ಬಳ್ಳಿಗಳು ಹಬ್ಬಿರುವುದು.

13 ಶ್ರೀ ಚಿತ್ರ 3-

ಕೆ.ಎಂ.ರಾಮಣ್ಣ

13 ಶ್ರೀ ಚಿತ್ರ 4-

ರಮೇಶ್ ಶೂನ್ಯ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ