ಶಾರದೆಯ ದರ್ಶನಕ್ಕೆ ಹರಿದು ಬರುತ್ತಿದೆ ಜನಸಾಗರ,ಧಾರ್ಮಿಕ, ಸಾಂಸ್ಕೃತಿಕ ಕಲರವ
ಶ್ರೀ ಶಾರದಾ ಪೀಠದಲ್ಲಿ ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರಗು ಪಡೆಯುತ್ತಿರುವ ನಡುವೆ ಪೀಠದ ಅಧಿದೇವತೆ ಶಾರದೆ ಬ್ರಾಹ್ಮಿ,ಮಾಹೇಶ್ವರಿ,ಕೌಮಾರಿ ಯಾಗಿ ಕಂಗೊಳಿಸಿದ ಶಾರದೆ ಗುರುವಾರ ವೈಷ್ಣವಿಯಾಗಿ ಶೋಭಿಸಿದಳು.
ಶ್ರೀ ಶಾರದಾಂಬೆಗೆ ವಿವಿಧ ಫಲಪುಷ್ಪ, ಸಕಲಾಭರಣಗಳಿಂದ ಅಲಂಕರಿಸಲಾಗಿತ್ತು .ವೈಷ್ಣವಿಯಾಗಿ ಕೈಯಲ್ಲಿ ಶಂಖ ಚಕ್ರ ಗದೆಗಳನ್ನು ಹಿಡಿದು ವಿಷ್ಣುವಿನ ವಾಹನವಾದ ಗರುಡವನ್ನೇರಿ ಭಕ್ತರನ್ನು ಅನುಗ್ರಹಿಸುತ್ತಿರುವ ಶಾರದೆ ಅಲಂಕಾರ ನಯನ ಮನೋಹರವಾಗಿತ್ತು.ಶ್ರೀ ಶಾರದೆ ಸನ್ನಿದಿಯಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿತು. ಜಗದ್ಗುರುಗಳು ಶಾರದೆಗೆ ನವರಾತ್ರಿ ವಿಶೇಷ ಪೂಜೆ ನೆರವೇರಿಸಿದರು. ಶ್ರೀ ಮಠದ ಆವರಣದ ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ, ಗಣಪತಿ,ಆಂಜನೆಯ,ಜನಾರ್ದನ ಸ್ವಾಮಿ,ಶ್ರೀ ಸುಬ್ರಮಣ್ಯ,ಕೋದಂಡರಾಮಸ್ವಾಮಿ ಎಲ್ಲಾ ದೇವಾಲಯಗಳಲ್ಲಿ ಪೂಜೆ ನೆರವೇರಿತು. ನವರಾತ್ರಿ ಅಂಗವಾಗಿ ಶ್ರೀ ಚಕ್ರಕ್ಕೆ ಸಂಪ್ರದಾಯದಂತೆ ನವಾವರಣ, ಸುವಾಸಿನಿ,ಕುಮಾರಿ ಪೂಜೆಗಳು ನೆರವೇರಿತು. ವೇದಗಳ ಪಾರಾಯಣ,ಲಲಿತೋಪಾಖ್ಯಾನ,ಪ್ರಸ್ಥನ್ನತ್ರಯ ಭಾಷ್ಯ,ಶ್ರೀ ಭುವನೇಶ್ವರಿ ಜಪ,ಶ್ರೀ ಸೂಪ್ತಜಪ ಇತ್ಯಾದಿಗಳು ನೆರವೇರಿತು.ಜಗದ್ಗುರುಗಳು ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.
ರಾಜಬೀದಿ ಉತ್ಸವದಲ್ಲಿ ಧರೆಕೊಪ್ಪ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು,ಭಜನಾ ಮಂಡಳಿಗಳು,ಕಲಾ ತಂಡಗಳು,ಸ್ತಬ್ದ ಚಿತ್ರಗಳು ಪಾಲ್ಗೊಂಡಿದ್ದವು.ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಚೆನೈನ ವಿದ್ವಾನ್ ಡಾ.ಗಣೇಶ್ ಭಾಗವತ್ತಾರ್ ತಂಡದವರಿಂದ ಹಾಡುಗಾರಿಕೆ ನಡೆಯಿತು. ಶುಕ್ರವಾರ ಶಾರದೆಗೆ ವೀಣಾಶಾರದಾಲಂಕಾರ ನಡೆಯಲಿದ್ದು, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾಂಭ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೈದರಾ ಬಾದಿನ ವಿಧುಷಿ ಎಮಾನಿ ಲಲಿತಾ ಕೃಷ್ಣ ತಂಡದವರಿಂದ ವೀಣಾವಾದನ ನಡೆಯಲಿದೆ.ರಾಜ ಬೀದಿ ಉತ್ಸವದಲ್ಲಿ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘಸಂಸ್ಥೆಗಳು,ಭಜನಾ ಮಂಡಳಿಗಳು ,ಕಲಾ ತಂಡಗಳು ಪಾಲ್ಗೊಳ್ಳಲಿವೆ.
15 ಶ್ರೀ ಚಿತ್ರ 2-ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಗುರುವಾರ ಭಕ್ತಗಣ ಗಿಜಿಗಿಡುತ್ತಿರುವುದು.