ಶ್ರೀಪಾದ ಹೆಗಡೆ ಕಡವೆಯವರ ಆದರ್ಶ ಯುವಜನಾಂಗಕ್ಕೆ ಮಾದರಿ: ಎಸ್.ಕೆ. ಭಾಗ್ವತ್

KannadaprabhaNewsNetwork | Published : Jul 25, 2024 1:20 AM

ಸಾರಾಂಶ

ದಿ. ಶ್ರೀಪಾದ ಹೆಗಡೆ ಕಡವೆ ಅವರು ತಾಲೂಕಿನ ಶೇ. ೯೫ರಷ್ಟು ರೈತರು ಒಂದಿಲ್ಲೊಂದು ಸಹಕಾರಿ ಸಂಘಗಳೊಂದಿಗೆ ಜೋಡಿಸಿಕೊಳ್ಳುವಂತೆ ಮಾಡಿದ್ದರು.

ಶಿರಸಿ: ದಿ. ಶ್ರೀಪಾದ ಹೆಗಡೆ ಕಡವೆ ಅವರ ತತ್ವ ಸಿದ್ಧಾಂತ, ಸಹಕಾರಿ ಸೇವೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಅಗತ್ಯವಿದೆ ಎಂದು ಹಿರಿಯ ಮುಖಂಡ ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ ತಿಳಿಸಿದರು.ಬುಧವಾರ ನಗರದ ಟಿಆರ್‌ಸಿ ಸಭಾಭವನದಲ್ಲಿ ದಿ. ಶ್ರೀಪಾದ ಹೆಗಡೆ ಕಡವೆ ಜನ್ಮಶತಾಬ್ದಿ ಆಚರಣಾ ಸಮಿತಿ ಹಾಗೂ ಟಿಆರ್‌ಸಿ ಶಿರಸಿಯ ಆಶ್ರಯದಲ್ಲಿ ಆಯೋಜಿಸಿದ್ದ ದಿ. ಶ್ರೀಪಾದ ಹೆಗಡೆ ಕಡವೆಯವರ ೨೯ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದಿ. ಶ್ರೀಪಾದ ಹೆಗಡೆ ಕಡವೆ ಅವರು ತಾಲೂಕಿನ ಶೇ. ೯೫ರಷ್ಟು ರೈತರು ಒಂದಿಲ್ಲೊಂದು ಸಹಕಾರಿ ಸಂಘಗಳೊಂದಿಗೆ ಜೋಡಿಸಿಕೊಳ್ಳುವಂತೆ ಮಾಡಿದ್ದರು.

ಮಹಸೂಲ ವಿಕ್ರಿ ಮತ್ತು ಖರೀದಿ ವ್ಯವಸ್ಥೆ ಹುಟ್ಟು ಹಾಕಿದ್ದು ಕಡವೆಯವರು. ಅವರಂತಹ ವ್ಯಕ್ತಿತ್ವ ಮತ್ತೆ ಹುಟ್ಟಿಬರುವ ಅವಶ್ಯಕತೆ ಕಾಣುತ್ತಿದೆ. ವ್ಯಾಪಾರಸ್ಥರನ್ನು ಎದುರು ಹಾಕಿಕೊಂಡು ಸಹಕಾರಿ ಕ್ಷೇತ್ರಕ್ಕೆ ಪ್ರಬಲ ವ್ಯವಸ್ಥೆ ನೀಡಿದ ಮಹಾನ್ ವ್ಯಕ್ತಿ. ಸಹಕಾರ ಕ್ಷೇತ್ರವನ್ನು ಬೆಳೆಸಿರುವ ಕಡವೆಯವರ ನಾಡಿನಲ್ಲಿ ಸಹಕಾರದೊಂದಿಗೆ ನಾವಿದ್ದೇವೆ ಎನ್ನುವುದೇ ಸಂತಸದ ವಿಷಯ ಎಂದರು.ವ್ಯವಸ್ಥೆ ಹಾಳಾಗಬಾರದು. ಅದನ್ನು ಮುನ್ನಡೆಸಿಕೊಂಡು ಹೋಗಬೇಕು. ಅದಕ್ಕೆ ನನ್ನ ಕೊಡುಗೆ ಏನು ಎನ್ನುವುದನ್ನು ಪ್ರಾಮಾಣಿಕವಾಗಿ ಮೂಡಿಸುವ ಸಮಯ ಇದಾಗಿದೆ. ಕಡವೆಯವರನ್ನು ವೈಭವೀಕರಿಸುವುದಲ್ಲ. ಕಡವೆಯವರ ತತ್ವ ಸಿದ್ಧಾಂತ, ಸಹಕಾರಿ ಸೇವೆಯನ್ನು ಪರಿಚಯಿಸುವುದೇ ನಮ್ಮ ಉದ್ದೇಶ ಆಗಬೇಕಿದೆ ಎಂದರು.ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಮಾತನಾಡಿ, ಡಿಸೆಂಬರ್‌ನಲ್ಲಿ ದಿ. ಶ್ರೀಪಾದ ಹೆಗಡೆ ಕಡವೆ ಅವರ ಜನ್ಮಶತಾಬ್ಧಿ ಆಚರಿಸಲು ತೀರ್ಮಾನಿಸಿದ್ದೇವೆ. ಮುಂದಿನ ದಿನ ಸೂಕ್ತ ಮಾರ್ಗದರ್ಶನದಲ್ಲಿ ಶತಾಬ್ಧಿ ಕಾರ್ಯಕ್ರಮ ಆಯೋಜಿಸುತ್ತೇವೆ. ಇಂದು ಹೆಸರಿಗೆ ಮಾತ್ರ ಕಡವೆಯವರು ಎನ್ನುತ್ತಾರೆ. ಆದರೆ ಅವರ ತತ್ವಸಿದ್ಧಾಂತ ದೂರವಾಗಿದೆ. ಬಡವರ ಮೇಲೆ ಬ್ರಹ್ಮಾಸ್ತ್ರದಂತಾಗಿದೆ. ಅನ್ನಕ್ಕೂ ಗತಿ ಇಲ್ಲದವರ ಮೇಲೆ ಸವಾರಿ ನಡೆಯುತ್ತಿದೆ ಎಂದರು.ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಅಡಕೆ ಬೆಳೆಗಾರರ ಸಮಸ್ಯೆಗೆ, ಬೆಳೆಗಾರರನ್ನು ಒಗ್ಗೂಡಿಸಿ ಸಹಕಾರ ವ್ಯವಸ್ಥೆಯಲ್ಲಿ ತೊಡಗಿಸಿ, ಬೆಳೆಗಾರರ ಶ್ರೇಯೋಭಿವೃದ್ಧಿಗೆ ಹಾಗೂ ಸಹಕಾರ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದರು ಎಂದರು.ಪ್ರಮುಖರಾದ ಆರ್.ಎನ್. ಹೆಗಡೆ, ದೀಪಕ ಹೆಗಡೆ ದೊಡ್ಡೂರು, ಶ್ರೀಪಾದ ಹೆಗಡೆ, ಕಡವೆ ಮತ್ತಿತರರು ಉಪಸ್ಥಿತರಿದ್ದರು.

Share this article