ವೈದ್ಯರ ಕೊರತೆ । ಹೆರಿಗೆಗೆ ಬಂದು ಜಿಲ್ಲಾಸ್ಪತ್ರೆಗೆ ತೆರಳಿದ ಗರ್ಭಿಣಿ
ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ತಳಕಲ್ಲ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲವೆಂದು ಗ್ರಾಮಸ್ಥರು ಬುಧವಾರ ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೆರಿಗೆಗೆ ಎಂದು ತಾಲೂಕಿನ ತಳಕಲ್ಲ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ತಾಲೂಕಿನ ಅಡವಿಹಳ್ಳಿ ಗ್ರಾಮದ ಗರ್ಭಿಣಿಯೊಬ್ಬರು 108 ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಬಂದಾಗ, ಅಲ್ಲಿ ವೈದ್ಯರಾಗಲಿ, ನರ್ಸ್ ಆಗಲಿ, ಸಿಬ್ಬಂದಿಯಾಗಲಿ ಯಾರೂ ಇಲ್ಲದ ಕಾರಣ ಕೊಪ್ಪಳದ ಜಿಲ್ಲಾಸ್ಪತ್ರೆಗೆ ತೆರಳಿದ ಘಟನೆ ಜರುಗಿದೆ. ಈ ಘಟನೆ ಹಿನ್ನೆಲೆ ಬುಧವಾರ ಬೆಳಗ್ಗೆ ತಳಕಲ್ಲ ಗ್ರಾಮದ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಯಾವ ಸಮಯದಲ್ಲೂ ನೋಡಿದರೂ ವೈದ್ಯರಿರುವುದಿಲ್ಲ. ವಾರದಲ್ಲಿ ಒಂದೆರೆಡು ದಿನ ಮಾತ್ರ ಕಾಣುತ್ತಾರೆ. ಸಭೆ, ಕಚೇರಿ ಓಡಾಟದ ಮೇಲಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ತಳಕಲ್ಲ, ಅಡವಿಹಳ್ಳಿ, ತಳಬಾಳ, ಕೋಮಲಾಪೂರ, ಚಿತ್ತಾಪೂರ, ವೀರಾಪೂರ, ಭಾನಾಪೂರ ಗ್ರಾಮಸ್ಥರು ತಳಕಲ್ಲ ಗ್ರಾಮದ ಆಸ್ಪತ್ರೆಯನ್ನು ಅವಲಂಬಿಸಿದ್ದು, ವೈದ್ಯರ ಕೊರತೆ ಜನರಿಗೆ ಆರೋಗ್ಯದ ಚಿಕಿತ್ಸೆ ನೀಡುವುದಕ್ಕೆ ತೊಂದರೆ ಉಂಟು ಮಾಡುತ್ತಿದೆ.
ನರ್ಸ್ ನಿರ್ಲಕ್ಷ್ಯ:ರಾತ್ರಿ ಕರ್ತವ್ಯದಲ್ಲಿದ್ದ ನರ್ಸ್ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ಇರಲಿಲ್ಲ. ಅಲ್ಲದೆ ವಿಷಯ ತಿಳಿದು ಸಹ ಬೇಗ ಬರಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಒಬ್ಬರೇ ವೈದ್ಯರು:ಈ ಆಸ್ಪತ್ರೆಗೆ ಒಬ್ಬರೇ ವೈದ್ಯರಿದ್ದು, ಇನ್ನೂ ಇಬ್ಬರು, ಮೂವರು ವೈದ್ಯರ ಅವಶ್ಯಕತೆ ಇದೆ. ಆದರೆ ವೈದ್ಯರ ಕೊರತೆಯನ್ನು ನಿಭಾಯಿಸಲು ಮೇಲಾಧಿಕಾರಿಗಳಿಗೆ ಆಸ್ಪತ್ರೆ ವೈದ್ಯ ಚಂದ್ರಕಾಂತ ಗೌಡರ ಹಲವಾರು ಬಾರಿ ಕೊರಿದ್ದಾರೆ.
ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಸ್ವಗ್ರಾಮದ ಆಸ್ಪತ್ರೆ:ತಳಕಲ್ಲ ಗ್ರಾಮ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಸ್ವಗ್ರಾಮ ಆಗಿದ್ದು, ಅಲ್ಲಿಯೇ ಜನರಿಗೆ ಸರಿಯಾಗಿ ಸವಲತ್ತು, ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಿರುವ 10 ಬೆಡ್ ಆಸ್ಪತ್ರೆಗೆ 3 ವೈದ್ಯರು ಬೇಕು. ಆದರೆ ಒಬ್ಬರೇ ವೈದ್ಯರಿದ್ದಾರೆ. ನರ್ಸ, ಸಿಬ್ಬಂದಿ ಕೊರತೆ ಸಹ ಇದೆ. ಅಲ್ಲದೆ ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೆರಿಗೆ ಆಸ್ಪತ್ರೆಯನ್ನು ತಳಕಲ್ಲಿನಲ್ಲಿ ಉದ್ಘಾಟನೆ ಮಾಡಿದ್ದು, ಶೀಘ್ರ ಅಲ್ಲಿ ಅವಶ್ಯಕ ವೈದ್ಯರು, ನರ್ಸ್, ಸಿಬ್ಬಂದಿ ನಿಯೋಜನೆ ಮಾಡಿದರೆ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆ ಲಭಿಸುತ್ತದೆ ಎಂಬುದು ಗ್ರಾಮಸ್ಥರ ಆಶಯವಾಗಿದೆ.