ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್ (ಮಾಹೆ)ಯು ಪ್ರತಿಷ್ಠಿತ ‘ಯುಕೆ-ಇಂಡಿಯಾ ಹೆಲ್ತ್‌ಟೆಕ್ ಆಕ್ಸಿಲರೇಟರ್’ ಕಾರ್ಯಕ್ರಮದ ಆತಿಥ್ಯ ವಹಿಸಿಕೊಳ್ಳಲಿದ್ದು, ಈ ಬಗ್ಗೆ ಮಾಹೆ ಮತ್ತು ಕರ್ನಾಟಕದ ಬ್ರಿಟಿಷ್ ರಾಯಬಾರ ಕಚೇರಿ ನಡುವೆ ಸೋಮವಾರ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್ (ಮಾಹೆ)ಯು ಪ್ರತಿಷ್ಠಿತ ‘ಯುಕೆ-ಇಂಡಿಯಾ ಹೆಲ್ತ್‌ಟೆಕ್ ಆಕ್ಸಿಲರೇಟರ್’ ಕಾರ್ಯಕ್ರಮದ ಆತಿಥ್ಯ ವಹಿಸಿಕೊಳ್ಳಲಿದ್ದು, ಈ ಬಗ್ಗೆ ಮಾಹೆ ಮತ್ತು ಕರ್ನಾಟಕದ ಬ್ರಿಟಿಷ್ ರಾಯಬಾರ ಕಚೇರಿ ನಡುವೆ ಸೋಮವಾರ ಒಪ್ಪಂದಕ್ಕೆ ಸಹಿ ಮಾಡಲಾಯಿತು.ಆರೋಗ್ಯ ತಂತ್ರಜ್ಞಾನ ವಲಯದಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಈ ಆಕ್ಸಿಲರೇಟರ್‌ನ 4ನೇ ಆವೃತ್ತಿಯ ಜಾಗತಿಕ ಕಾರ್ಯಕ್ರಮ ಜು. 22ರಿಂದ 24ರವರೆಗೆ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಮೂರು ದಿನಗಳ ಈ ಕಾರ್ಯಕ್ರಮವು ಎರಡೂ ದೇಶಗಳ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳು, ನೀತಿ ನಿರೂಪಕರು, ಆರೋಗ್ಯ ತಜ್ಞರು, ಹೂಡಿಕೆದಾರರು ಹಾಗೂ ಉದ್ಯಮದ ಪ್ರಮುಖರನ್ನು ಒಂದೇ ವೇದಿಕೆಗೆ ತರಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ದೇಶದ 25 ಹೆಲ್ತ್‌ಟೆಕ್ ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಅತ್ಯುತ್ತಮ 6 ಕಂಪನಿಗಳಿಗೆ ಸಂಪೂರ್ಣ ಅನುದಾನಿತ ಯುಕೆ ಪ್ರವಾಸದ ಅವಕಾಶ ಸಿಗಲಿದ್ದು, ಅಲ್ಲಿನ ಆರೋಗ್ಯ ವ್ಯವಸ್ಥೆ ಹಾಗೂ ಉದ್ಯಮದ ಪ್ರಮುಖರೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶವಿರುತ್ತದೆ. ಇದು ಭಾರತೀಯ ಹೆಲ್ತ್‌ಟೆಕ್ ಕಂಪನಿಗಳಿಗೆ ತಮ್ಮ ಆವಿಷ್ಕಾರಗಳನ್ನು ಯುಕೆಯ ‘ರಾಷ್ಟ್ರೀಯ ಆರೋಗ್ಯ ಸೇವೆ’ಯಡಿಯಲ್ಲಿ ವಿಸ್ತರಿಸಲು ನೆರೆವಾಗಲಿದೆ.

ಒಪ್ಪಂದದ ನಂತರ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, ‘ಮಾಹೆಯಲ್ಲಿ ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮವು ಜಾಗತಿಕ ಆರೋಗ್ಯ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಪ್ರಮುಖ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳನ್ನು ಮಣಿಪಾಲಕ್ಕೆ ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಇಲ್ಲಿ ಮೂಡಿಬರುವ ಹೊಸ ಆಲೋಚನೆಗಳು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ರೋಗಿಗಳಿಗೆ ನೆರವಾಗಲಿವೆ’ ಎಂದರು.ಕರ್ನಾಟಕದ ಬ್ರಿಟಿಷ್ ಉಪರಾಯಭಾರಿ ಚಂದ್ರು ಅಯ್ಯರ್ ಮಾತನಾಡಿ, “ವಿಶ್ವದಲ್ಲೇ ಅತಿ ದೊಡ್ಡದಾದ ಭಾರತದ ಹೆಲ್ತ್‌ಟೆಕ್ ವ್ಯವಸ್ಥೆಯು ಹೊಸ ಆಲೋಚನೆ ಹಾಗೂ ಕೈಗೆಟುಕುವ ಚಿಕಿತ್ಸಾ ಪದ್ಧತಿಗಳಿಂದಾಗಿ ವೇಗವಾಗಿ ಮುನ್ನಡೆಯುತ್ತಿದೆ. ಇಂತಹ ಹೊಸ ತಂತ್ರಜ್ಞಾನಗಳನ್ನು ತರುತ್ತಿರುವ ಭಾರತದ ಕಂಪನಿಗಳ ಜತೆ ಕೈಜೋಡಿಸಲು ಬ್ರಿಟನ್ ಆಸಕ್ತಿ ಹೊಂದಿದೆ. ಈ ಯೋಜನೆಯಡಿ ಆಯ್ಕೆಯಾಗುವ ಕಂಪನಿಗಳಿಗೆ ಯುಕೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಅಲ್ಲಿನ ತಜ್ಞರೊಂದಿಗೆ ನೇರ ಸಂಪರ್ಕ ಕಲ್ಪಿಸಿ, ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು ಎಂದರು.