ರಾಂ ಅಜೆಕಾರು ಕಾರ್ಕಳ
ರಾಜ್ಯದಲ್ಲಿ ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ‘ಮರಗಂತಿ ಕಪ್ಪೆ’ಯನ್ನು ರಾಜ್ಯದ ಅಧಿಕೃತ ಉಭಯ ಜೀವಿ ಹಾಗೂ ‘ತುಡುವೆ ಜೇನು’ವನ್ನು ರಾಜ್ಯದ ರಾಜ್ಯ ಕೀಟವನ್ನಾಗಿ ಘೋಷಿಸುವ ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ಬೆನ್ನಲ್ಲೇ ಕರಾವಳಿ ಮತ್ತು ಮಲೆನಾಡು ಭಾಗದ ಜೇನು ಸಾಕಣೆಗಾರರು ಹಾಗೂ ಮಲೆಕುಡಿಯ ಸಮುದಾಯದಲ್ಲಿ ಆತಂಕ ಮನೆಮಾಡಿದೆ. ಪರಿಸರ ಸಂರಕ್ಷಣೆ ಅಗತ್ಯವೆಂಬುದನ್ನು ಒಪ್ಪಿಕೊಂಡರೂ, ಈ ಘೋಷಣೆಯಿಂದ ಮುಂದಿನ ದಿನಗಳಲ್ಲಿ ಜೇನು ಸಂಗ್ರಹ, ಸಾಕಣೆ ಅಥವಾ ಜೇನುತುಪ್ಪ ಮಾರಾಟ ನಿರ್ಬಂಧವಾಗುವ ಸಾಧ್ಯತೆ ಇದೆ ಎಂಬ ಭಯ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ.ಕುದುರೆಮುಖ ವನ್ಯಜೀವಿ ವಿಭಾಗ ಸೇರಿದಂತೆ ಉಡುಪಿ, ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಅರೆಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ತುಡುವೆ ಜೇನು ಸಾಕಣೆಯನ್ನು ಜೀವನೋಪಾಯವಾಗಿ ನಂಬಿಕೊಂಡಿವೆ. ಉಡುಪಿ ಜಿಲ್ಲೆಯಲ್ಲೇ 450ಕ್ಕೂ ಹೆಚ್ಚು ಮಲೆಕುಡಿಯ ಕುಟುಂಬಗಳು ಕಾಡುತ್ಪತ್ತಿ ಹಾಗೂ ತುಡುವೆ ಜೇನು ಸಂಗ್ರಹದ ಮೇಲೆ ಅವಲಂಬಿತವಾಗಿವೆ. ‘ತುಡುಮೆ’ ಜೇನು ಎಂದು ಸ್ಥಳೀಯರು ಹೇಳುತ್ತಾರೆ.ತುಡುವೆ ಜೇನು ಭಾರತೀಯ ಮೂಲದ ಜೇನು ನೊಣವಾಗಿದ್ದು, ಮರದ ಪೊಟರೆಗಳು ಹಾಗೂ ಕಾಡಿನ ಹುತ್ತಗಳಲ್ಲಿ ಸಹಜವಾಗಿ ವಾಸಿಸುತ್ತವೆ. ಇವುಗಳ ಸ್ವಭಾವ ಶಾಂತವಾಗಿರುವುದರಿಂದ ರೈತರು ಪೆಟ್ಟಿಗೆಗಳ ಮೂಲಕ ಸಾಕಣೆ ನಡೆಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಜನರು ಎತ್ತರದ ಮರಗಳಿಗೆ ಹತ್ತಿ ಹೊಗೆ ಬಳಸಿ ಜೇನು ಸಂಗ್ರಹಿಸುತ್ತಿದ್ದರು. ಇದು ಅಪಾಯಕಾರಿ ಕೆಲಸವಾಗಿದ್ದರೂ, ಇಂದಿನ ಸಾಕಾಣಿಕಾರರು ಯಂತ್ರಗಳ ಮೂಲಕ ಹಿಂಸೆರಹಿತ ವಿಧಾನದಲ್ಲಿ ಜೇನು ಸಂಗ್ರಹ ನಡೆಸುತ್ತಿದ್ದಾರೆ. ಇದರಿಂದ ಜೇನು ನೊಣಗಳ ಕುಟುಂಬಕ್ಕೆ ಹಾನಿಯಾಗದೆ, ಅವುಗಳ ವಂಶ ವೃದ್ಧಿಗೂ ಸಹಕಾರಿಯಾಗುತ್ತಿದೆ ಎಂದು ಸಾಕಣೆಗಾರರು ಅಭಿಪ್ರಾಯಪಡುತ್ತಾರೆ.ಮೂಲ ಸಂಸ್ಕೃತಿಗೆ ಧಕ್ಕೆ: ತುಡುವೆ ಜೇನು ಕೇವಲ ಜೇನು ತುಪ್ಪ ಉತ್ಪಾದನೆಗೆ ಮಾತ್ರ ಸೀಮಿತವಲ್ಲ. ಇವು ಅತ್ಯುತ್ತಮ ಪರಾಗಸ್ಪರ್ಶಕಗಳಾಗಿದ್ದು, ತೆಂಗು, ಅಡಕೆ, ತರಕಾರಿ ಹಾಗೂ ಹಣ್ಣಿನ ಬೆಳೆಗಳ ಇಳುವರಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಜೇನು ನೊಣ ಸುಮಾರು 1.5 ಕಿ.ಮೀ. ದೂರವರೆಗೆ ಹಾರಾಡಿ ಪರಾಗಸ್ಪರ್ಶ ನಡೆಸುತ್ತದೆ. ಇದರ ಪರಿಣಾಮವಾಗಿ ಕೃಷಿ ಉತ್ಪಾದನೆಗೂ ನೇರ ಲಾಭವಾಗುತ್ತಿದೆ. ಕರಾವಳಿ ಭಾಗದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಈ ವಲಯ ನೇರ ಮತ್ತು ಪರೋಕ್ಷ ಉದ್ಯೋಗ ಒದಗಿಸಿದೆ. ಅದರಲ್ಲೂ ಸ್ಥಳೀಯ ಮೂಲ ಸಂಸ್ಕೃತಿಗೆ ಪೆಟ್ಟಾಗಬಹುದು ಎಂದು ಅಂದಾಜಿಸಲಾಗಿದೆ.
ಜೇನು ಸಾಕಣೆಗಾರರು ಹೇಳುವಂತೆ, ಸರ್ಕಾರ ರಾಜ್ಯ ಕೀಟ ಘೋಷಣೆ ಮಾಡುವ ಮೊದಲು ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಬೇಕು. ಸಂರಕ್ಷಣೆ ಹೆಸರಿನಲ್ಲಿ ಜೀವನೋಪಾಯಕ್ಕೆ ಅಡ್ಡಿಯಾಗಬಾರದು. ಬದಲಾಗಿ ವೈಜ್ಞಾನಿಕ ಮಾರ್ಗಸೂಚಿ ರೂಪಿಸಿ, ಅಕ್ರಮವಾಗಿ ಬೆಂಕಿ ಹಚ್ಚಿ ಜೇನು ಸಂಗ್ರಹಿಸುವಂತಹ ಕ್ರೂರ ವಿಧಾನಗಳಿಗೆ ಮಾತ್ರ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇನ್ನೊಂದೆಡೆ ಪರಿಸರ ತಜ್ಞರು ತುಡುವೆ ಜೇನುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.ಕೀಟನಾಶಕಗಳ ಅತಿಯಾದ ಸಿಂಪರಣೆ, ವಾಯು ಮಾಲಿನ್ಯ, ಅರಣ್ಯ ನಾಶ, ನಗರೀಕರಣ ಹಾಗೂ ಆಧುನಿಕ ಕೃಷಿ ಪದ್ಧತಿಗಳು ಸಹಜ ಜೇನು ಸಂಸ್ಕೃತಿಗೆ ಭಾರಿ ಹೊಡೆತ ನೀಡುತ್ತಿವೆ. ಹೂವುಗಳ ವೈವಿಧ್ಯ ಕಡಿಮೆಯಾಗುತ್ತಿರುವುದರಿಂದ ಜೇನು ನೊಣಗಳ ಆಹಾರ ಸರಪಳಿಗೂ ಧಕ್ಕೆ ಉಂಟಾಗಿದೆ.‘ಮರಗಂತಿ ಕಪ್ಪೆ’ಗಳಂತೆ ತುಡುವೆ ಜೇನುಗಳೂ ಪರಿಸರ ಸಮತೋಲನದ ಸಂಕೇತಗಳಾಗಿವೆ. ಆದರೆ ಸಂರಕ್ಷಣೆ ಮತ್ತು ಜೀವನೋಪಾಯದ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಪರಿಸರ ರಕ್ಷಣೆ ಜೊತೆಗೆ ಜೇನು ಸಾಕಾಣಿಕಾರರ ಬದುಕು ಭದ್ರವಾಗುವಂತೆ ಸೂಕ್ತ ನೀತಿ ರೂಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.*ಜೇನು ರಾಜ್ಯ ಕೀಟವಾಗಿ ಘೋಷಣೆ ಸ್ವಾಗತಾರ್ಹ. ಬೆಂಕಿ, ಕೀಟನಾಶಕ ಬಳಸಿ ಜೇನು ನಾಶ ಮಾಡುವಲ್ಲಿ ವಿದ್ಯಾವಂತರೇ ಹೆಚ್ಚು. ಜೇನು ಕೀಟ ಉಳಿಸುವ ಜಾಗೃತ ಸಮಾಜ ನಿರ್ಮಾಣಕ್ಕೆ ಈ ಘೋಷಣೆ ಸಹಕಾರಿ ಆದೀತು. ಜೇನಿಗೆ ಮಾರಕವಾಗುತ್ತಿರುವ ಕೀಟನಾಶಕಗಳ ನಿಷೇಧ ಈ ಘೋಷಣೆಯ ಜೊತೆಗೆ ಆಗಬೇಕು.
-ಭರತ್ ರಾಜ್ ಸೊರಕೆ ಪುತ್ತೂರು, ಜೇನು ಕೃಷಿಕ
*ಕುದುರೆಮುಖ ವ್ಯಾಪ್ತಿಯ 2000ಕ್ಕೂ ಹೆಚ್ಚು ಮಲೆಕುಡಿಯ ಕುಟುಂಬಗಳು ಕಾಡುತ್ಪತ್ತಿಯನ್ನೇ ನಂಬಿಕೊಂಡಿವೆ. ಜೇನು ಸಂಗ್ರಹಿಸುವುದು ನಮ್ಮ ಪಾರಂಪರಿಕ ನಾಜೂಕು ಕಲೆ. ವಿಷ ಪ್ರಯೋಗ, ಬೆಂಕಿ ಹಾಕಿ ಹಿಂಸಾತ್ಮಕವಾಗಿ ಜೇನು ಸಂಗ್ರಹಿಸುವುದು ನಿಲ್ಲಬೇಕು. ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆಯಾಗದಂತೆ, ಸಂರಕ್ಷಣೆ ದೃಷ್ಟಿಯಿಂದ ತುಡುಮೆ ಜೇನನ್ನು ರಾಜ್ಯ ಕೀಟವಾಗಿ ಘೋಷಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ.
-ಗಂಗಾಧರ ಗೌಡ ಈದು, ಮಲೆಕುಡಿಯ ಸಮುದಾಯದ, ರಾಜ್ಯಾಧ್ಯಕ್ಷರು *ಮರಗಂತಿ ಕಪ್ಪೆಯನ್ನು ರಾಜ್ಯದ ಅಧಿಕೃತ ಉಭಯ ಜೀವಿ ಹಾಗೂ ‘ತುಡುವೆ ಜೇನು’ವನ್ನು ರಾಜ್ಯದ ರಾಜ್ಯ ಕೀಟವನ್ನಾಗಿ ಘೋಷಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪರಿಸರ ತಜ್ಞರು, ಸ್ಥಳೀಯ ಸಮುದಾಯಗಳು ಹಾಗೂ ಸಂಬಂಧಿತ ಇಲಾಖೆಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.-ಈಶ್ವರ ಬಿ. ಖಂಡ್ರೆ, ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ