ಕನ್ನಡಪ್ರಭ ವಾರ್ತೆ ಬೆಂಗಳೂರು

ಮ್ಯಾನ್ಮಾರ್‌ನಲ್ಲಿರುವ ಚೀನಾ ನಿಯಂತ್ರಿತ ಆನ್‌ಲೈನ್ ವಂಚನೆ ಕೇಂದ್ರದಲ್ಲಿ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಸೈಬರ್ ಕಮಾಂಡ್ ಘಟಕದ ಅಧಿಕಾರಿಗಳು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್ಚಿನ ಸಂಬಳದ ಆಸೆಗೆ ಮ್ಯಾನ್ಮರ್‌ಗೆ ತೆರಳಿ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಗಾಗಿದ್ದ ಇಬ್ಬರು ಯುವಕರನ್ನು ಕೇಂದ್ರದ ತನಿಖಾ ಸಂಸ್ಥೆಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಿದ ಸೈಬರ್‌ ಕಮಾಂಡ್ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಜಿಎಫ್‌ನ ಪ್ರೀತಂ ಮತ್ತು ಸಂಜಯ್‌ ಎಂಬುವರನ್ನು ಥೈಲ್ಯಾಂಡ್‌-ಮ್ಯಾನ್ಮರ್‌ ಗಡಿ ಭಾಗದಲ್ಲಿ ರಕ್ಷಣೆ ಮಾಡಲಾಗಿದೆ. ಇಂಡಿಯನ್‌ ಸೈಬರ್‌ ಕ್ರೈಂ ಕೋ-ಆರ್ಡಿನೇಷನ್‌ ಸೆಂಟರ್‌ (ಐ4ಸಿ) ಮತ್ತು ಮ್ಯಾನ್ಮರ್‌ನ ರಾಯಭಾರ ಕಚೇರಿ ಅಧಿಕಾರಿಗಳು, ಇಡಿ ಅಧಿಕಾರಿಗಳ ಸಹಕಾರದೊಂದಿಗೆ ಯುವಕರ ರಕ್ಷಣೆ ಮಾಡಲಾಗಿದೆ. ಇಬ್ಬರನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ ಎಂದು ಸೈಬರ್‌ ಕಮಾಂಡ್‌ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೇಸ್‌ಬುಕ್ ಜಾಹೀರಾತಿಗೆ ಮರುಳಾಗಿದ್ದರು:


ಇಬ್ಬರು ಯುವಕರು ಈ ಮೊದಲು ಅಂತಾರಾಷ್ಟ್ರೀಯ ವಾಯ್ಸ್ ಪ್ರೊಸೆಸ್ ಬಿಪಿಒ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 4 ತಿಂಗಳ ಹಿಂದೆ ಸಂಸ್ಥೆ ಮುಚ್ಚಿದ ಬಳಿಕ ಉದ್ಯೋಗಕ್ಕಾಗಿ ಹುಡುಕುತ್ತಿದ್ದ ಅವರು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಚಾಟ್ ಪ್ರೊಸೆಸ್ ಉದ್ಯೋಗ ಜಾಹೀರಾತಿಗೆ ಅರ್ಜಿ ಸಲ್ಲಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ಆನ್‌ಲೈನ್ ಸಂದರ್ಶನದಲ್ಲಿ ಭಾಗವಹಿಸಿದ ಬಳಿಕ ಅವರಿಗೆ ತಕ್ಷಣವೇ ವೀಸಾ ಹಾಗೂ ವಿಮಾನ ಟಿಕೆಟ್‌ಗಳನ್ನು ಕಳುಹಿಸಲಾಗಿತ್ತು.

ಪ್ರಯಾಣಕ್ಕೆ ಕೇವಲ ಐದು ಗಂಟೆಗಳ ಮೊದಲು ರಾಯ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ತಮ್ಮನ್ನು ಲೈನ್ ಮ್ಯಾನೇಜರ್ ಎಂದು ಹೇಳಿಕೊಂಡು, ಥೈಲ್ಯಾಂಡ್‌ಗೆ ಕರೆದೊಯ್ದಿದ್ದ. ನಂತರ ಭದ್ರತಾ ಸಿಬ್ಬಂದಿ ಜತೆ ಬೋಡ್‌ ನದಿಯ ಮೂಲಕ ಕರೆದೊಯ್ದುು, ಆ ಬಳಿಕ ಸುಮಾರು 450 ಕಿ.ಮೀ. ದೂರದ ಒಳನಾಡಿನಲ್ಲಿರುವ ಚೀನೀ ನಿರ್ವಹಣೆಯ ಭದ್ರತಾ ವಲಯದ ವಂಚನಾ ಕೇಂದ್ರಕ್ಕೆ ಕಾರಿನಲ್ಲಿ ಕರೆದೊಯ್ಯಲಾಯಿತು. ಅಲ್ಲಿಗೆ ಹೋದ ನಂತರ ಅಮೆರಿಕಾದಲ್ಲಿರುವ ಭಾರತೀಯ ವಲಸಿಗರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ಮಾಡಿಸುತ್ತಿದ್ದರು. ಒಂದು ವೇಳೆ ಹೇಳಿದಂತೆ ಕೇಳದಿದ್ದರೆ, ವಿದ್ಯುತ್‌ ಶಾಕ್ ಕೊಡುವುದು, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು. ಒಂಟಿಯಾಗಿ ಕೂಡಿ ಹಾಕುವುದು ಮಾಡುತ್ತಿದ್ದರು ಎಂದು ಯುವಕರು ಹೇಳಿಕೊಂಡಿದ್ದಾರೆ.

ಈ ಮಧ್ಯೆ ಮೊಬೈಲ್‌ ಬಳಕೆ ನೀಡಿದ್ದ ಅವಧಿಯಲ್ಲಿ ಯುವಕರು, ಬೆಂಗಳೂರಿನಲ್ಲಿರುವ ಕೇಂದ್ರದ ತನಿಖಾ ಸಂಸ್ಥೆಯೊಂದರ ಚಾಲಕನನ್ನು ಸಂಪರ್ಕಿಸಿ, ಘಟನೆಯನ್ನು ವಿವರಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ತಕ್ಷಣ ಅದನ್ನು ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆ ಅಧಿಕಾರಿ ಸೈಬರ್ ಕಮಾಂಡ್ ಸೆಂಟರ್‌ನ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೈಬರ್‌ ಕಮಾಂಡ್‌ ಘಟಕದ ಅಧಿಕಾರಿಗಳು ಭಾರತೀಯ ರಾಯಭಾರ ಕಚೇರಿ, ಸೈಬರ್‌ ಕ್ರೈಂ ಕೋ-ಆರ್ಡಿನೇಷನ್‌ ಸೆಂಟರ್‌ನ ಅಧಿಕಾರಿಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಯುವಕರ ರಕ್ಷಣೆ ಮಾಡಿದ್ದಾರೆ.

ಸಾರ್ವಜನಿಕರಲ್ಲಿ ಮನವಿ:

ವಿದೇಶಗಳಲ್ಲಿ ಉದ್ಯೋಗ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಜಾಹೀರಾತುಗಳನ್ನು ನಂಬುವ ಮೊದಲು ಅವುಗಳ ವಿಶ್ವಾಸಾರ್ಹತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೈಬರ್ ಕಮಾಂಡ್ ಘಟಕದ ಡಿಜಿಪಿ ಪ್ರಣಬ್ ಮೊಹಂತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.